ADVERTISEMENT

ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 15:30 IST
Last Updated 26 ನವೆಂಬರ್ 2021, 15:30 IST
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ   

ಬೀದರ್: ಡಾ. ಶಿವಕುಮಾರ ಸ್ವಾಮೀಜಿ ಅವರ 77ನೇ ಜಯಂತಿ ಮಹೋತ್ಸವ ಇಲ್ಲಿಯ ಸಿದ್ಧಾರೂಢ ಮಠದ ಚಿದಂಬರಾಶ್ರಮದಲ್ಲಿ ಶುಕ್ರವಾರ ಆರಂಭಗೊಂಡಿತು.

ಬೆಳಿಗ್ಗೆ ಮಠದ ಸಾಧಕ, ಸಾಧಕಿಯರಿಂದ ಜಪ, ಧ್ಯಾನ, ಸಿದ್ಧಾರೂಢರ ಚರಿತ್ರೆ ಪಾರಾಯಣ ನಡೆದವು.
ಜ್ಞಾನವಾದರೆ ಸಮಾಧಾನ: ಜಯಂತಿ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಡಾ. ಶಿವಕುಮಾರ ಸ್ವಾಮೀಜಿ ಅವರು, ಮನುಷ್ಯನಿಗೆ ಪರಮ ಜ್ಞಾನವಾದರೆ ಜೀವನದಲ್ಲಿ ನಿಜವಾದ ಸಮಾಧಾನ, ಶಾಂತಿ ದೊರಕುತ್ತದೆ ಎಂದು ಹೇಳಿದರು.

ಜ್ಞಾನದ ಜತೆಗೆ ಅಜ್ಞಾನವೂ ಇರುತ್ತದೆ. ಸಮಸ್ತ ವ್ಯವಹಾರಗಳು ಜ್ಞಾನದಲ್ಲೇ ನಡೆಯುತ್ತವೆ. ನನಗೆ ತಿಳಿದಿಲ್ಲ ಎನ್ನುವುದೇ ಅಜ್ಞಾನ ಎಂದು ನುಡಿದರು.ಬದುಕು ಸಾರ್ಥಕಕ್ಕೆ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.

ADVERTISEMENT

ಕಲಬುರ್ಗಿಯ ಮಾತೆ ಲಕ್ಷ್ಮೀದೇವಿ ಮಾತನಾಡಿ, ಜಗತ್ತು, ಜೀವ, ಶರೀರ ಇವೆಲ್ಲವೂ ಮಾಯಾ ಸ್ವರೂಪಗಳೇ ಎಂದು ಹೇಳಿದರು.

ಶರೀರ ಪಂಚಭೂತಾತ್ಮಕ. ಅವ್ಯಕ್ತ ಪಂಚಭೂತದೊಳಗೆ ವ್ಯಕ್ತವಾಗಿದೆ. ಪುನಃ ಅವ್ಯಕ್ತದೊಳಗೇ ಮಾಯವಾಗುವುದು. ಜ್ಞಾನದ ರಸಹ್ಯ ತಿಳಿಯಲು ಗುರುಕೃಪೆಯೇ ಬೇಕು ಎಂದು ತಿಳಿಸಿದರು.

ಬಸವಾನಂದ ಸ್ವಾಮೀಜಿ ಮಾತನಾಡಿ, ಎಲ್ಲಿಯವರೆಗೆ ಅಜ್ಞಾನ ಕಳೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ದುಃಖದಿಂದ ಪಾರಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಶರಣರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿದ್ದಾರೆ ಎಂದು ಹೇಳಿದರು.

ದುಃಖ ನಿವಾರಣೆಗೆ ಪುಣ್ಯವನ್ನೇ ಮಾಡಬೇಕು. ರಾಗ-ದ್ವೇಷ ರಹಿತನಾಗಿರಬೇಕು ಎಂದು ಸಲಹೆ ಮಾಡಿದರು.

ಕಲ್ಲಹಂಗರ್ಗಾದ ಗೋಪಾಲ್ ಶಾಸ್ತ್ರಿ ಮಾತನಾಡಿದರು. ಗಣೇಶಾನಂದ ಮಹಾರಾಜ್, ದಯಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಮಾತೆ ಆನಂದಮಯಿ, ಮಾತೆ ಸುಶಾಂತಾ, ಸಂಗೀತಾದೇವಿ, ಸತೀಶ ದೇವರು, ಷಡಕ್ಷರಿ ಸ್ವಾಮೀಜಿ, ವಿನಾಯಕ ದೇವರು ಇದ್ದರು.

ಜಯಂತಿ ಮಹೋತ್ಸವ ನವೆಂಬರ್ 30 ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.