
ಬೀದರ್: ‘ನಿರಂತರವಾಗಿ ಈ ದೇಶದ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ ‘ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ’ (ಎಸ್‌ಐಆರ್) ಮೂಲಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ’ ಎಂದು ಚಿಂತಕ ಶಿವಸುಂದರ್ ವ್ಯಾಖ್ಯಾನ ಮಾಡಿದರು.
ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಬೀದರ್ ಘಟಕದಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಂತನ ಮಂಥನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಳುವ ಪಕ್ಷ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ ಒಂದು ಪುಸ್ತಕದ ಮೇಲಿನ ದಾಳಿಯಲ್ಲ. ಈ ದೇಶದ ಜನರ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.
ಮತಪಟ್ಟಿ ಪರಿಷ್ಕರಣೆಗೆ ಯಾರೂ ವಿರೋಧಿಸುತ್ತಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಮಾನದಂಡಗಳು ಸೂಕ್ತವಲ್ಲ. ಈ ದೇಶದ ಬಹುಸಂಖ್ಯಾತ ಜನರ ಬಳಿ ಅವರ ಪೂರ್ವಜರು, ಅವರ ದಾಖಲೆಗಳೇ ಇಲ್ಲ. ಹೀಗಿರುವಾಗ ಈ ದೇಶದ ನಾಗರಿಕ ಎನ್ನುವುದಕ್ಕೆ ಯಾವುದಾದರೂ ಪುರಾವೆ ಕೊಡಬೇಕೆಂದು ಷರತ್ತು ವಿಧಿಸಿರುವುದು ದೊಡ್ಡ ಹುನ್ನಾರ ಎಂದು ಆರೋಪಿಸಿದರು.
ಈ ದೇಶದ ಮತದಾರನಾಗಲು ಈ ದೇಶದಲ್ಲಿ ಹುಟ್ಟಿರಬೇಕಾದದ್ದು ಬಹಳ ಮುಖ್ಯ. ವಿದೇಶಿ ನುಸುಳುಕೋರರನ್ನು ಹುಡುಕಿ ಹೊರಹಾಕುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ. ಆ ಕೆಲಸ ಮಾಡಲಿ. ಆದರೆ, ದೇಶದ ಎಲ್ಲ ಪ್ರಜೆಗಳನ್ನು ಎಸ್‌ಐಆರ್ ಮೂಲಕ ವಿಚಾರಿಸುತ್ತಿದ್ದಾರೆ. ಇದು ಮತಪಟ್ಟಿ ಪರಿಷ್ಕರಣೆ ಅಲ್ಲ, ಭಾರತೀಯರ ನಾಗರಿಕತ್ವ ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಭಾರತದ ನಾಗರಿಕನಲ್ಲ ಎಂದರ್ಥ. ಬದುಕಿ ಸತ್ತಂತೆ. ಈ ದೇಶವನ್ನು ಆಳುತ್ತಿರುವವರು ಸಾವರ್ಕರ್ ಸಿದ್ದಂತದ ಮನಃಸ್ಥಿತಿ ಹೊಂದಿದ್ದಾರೆ. ಎಸ್‌ಐಆರ್ ಮೂಲಕ ಮೋದಿ ಸರ್ಕಾರವು ದೇಶದ ಜನರ ಮೇಲೆ ಎಫ್‌ಐಆರ್ ಹಾಕುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಜಗದೀಶ್ವರ ಬಿರಾದಾರ, ಓಂಪ್ರಕಾಶ್ ರೊಟ್ಟೆ, ವಿನಯಕುಮಾರ್ ಮಾಳಗೆ, ವಿಠಲದಾಸ ಪ್ಯಾಗೆ, ಅಬ್ದುಲ್ ಮನ್ನಾನ್ ಸೇಠ್, ಮೌಲಾನಾ ಮೌನಿಶ್ ಕಿರ್ಮಾನಿ, ಚನ್ನಬಸವಾನಂದ ಸ್ವಾಮೀಜಿ, ಮಂಜುಳಾ ಮೇತುಶೀಲಾ, ಮಲ್ಲಿಗೆ ಸಿರಿಮನೆ, ಮಹೇಶ್ ಗೊರನಾಳಕರ್, ಸತ್ಯದೇವಿ ಮಾತಾಜಿ, ಡಾ.ಮಕ್ಸೂದ್ ಚಂದಾ ಸೇರಿದಂತೆ ಮತ್ತಿತರರು ಇದ್ದರು.
‘ಜನರೇ ಮತದಾರರ ಪಟ್ಟಿ ಸಿದ್ಧಪಡಿಸಲಿ’
‘ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆಯ ಬಗ್ಗೆ ನಮಗೆ ವಿಶ್ವಾಸ ಉಳಿದಿಲ್ಲ. ಆದಕಾರಣ ಜನರೇ ಪ್ರತಿ ವಾರ್ಡ್ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಿದ್ಧವಿಟ್ಟುಕೊಂಡು ಪಾರದರ್ಶಕವಾದ ಮತದಾರರ ಪಟ್ಟಿ ತಯಾರಿಸಬೇಕು. ಈ ಕೆಲಸ ಮಾಡದಿದ್ದರೆ ನಮ್ಮ ಮತದಾನದ ಹಕ್ಕಷ್ಟೇ ಅಲ್ಲ ನಾಗರಿಕತ್ವ ಕೂಡ ಕಳೆದುಕೊಳ್ಳುತ್ತೇವೆ’ ಎಂದು ‘ಎದ್ದೇಳು ಕರ್ನಾಟಕ’ ಕೇಂದ್ರ ಸಮಿತಿ ಸದಸ್ಯೆ ತಾರಾ ರಾವ್ ಎಚ್ಚರಿಸಿದರು.
‘ಎಸ್‌ಐಆರ್ ನಂತರ ಹಿಂದೂಗಳಷ್ಟೇ ಮತದಾರರು’
‘ದೇಶದಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಮುಗಿದ ನಂತರ ಹಿಂದೂಗಳಷ್ಟೇ ಮತದಾರರ ಪಟ್ಟಿಯಲ್ಲಿ ಮತದಾರರಾಗಿ ಉಳಿಯಲಿದ್ದಾರೆ. ಎಸ್‌ಐಆರ್ ಮೂಲಕ ಭಾರತವನ್ನು ಇಸ್ರೇಲೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಇಸ್ರೇಲ್‌ನಲ್ಲಿ ಬೇರೆ ಬೇರೆ ಜನಾಂಗದವರು ಇದ್ದಾರೆ. ಆದರೆ ಜ್ವೀಸ್‌ಗಳಿಗಷ್ಟೇ ಮತದಾನದ ಹಕ್ಕಿದೆ. ಭಾರತದಲ್ಲಿ ಹಿಂದೂಗಳಿಗಷ್ಟೇ ಮತದಾನದ ಹಕ್ಕು ಕೊಡುವುದು ಇದರ ಹಿಂದಿನ ಉದ್ದೇಶ’ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪಿಸಿದರು.
ಮತದಾರರ ಪಟ್ಟಿಯಲ್ಲಿ ಯಾರ ಹೆಸರುಗಳಿರುತ್ತವೆಯೋ ರಾಜಕೀಯ ಪಕ್ಷಗಳು ಅವರ ಬಗ್ಗೆಯಷ್ಟೇ ಮಾತಾಡುತ್ತವೆ. ಎಸ್‌ಐಆರ್ ಬಗ್ಗೆ ರಾಜಕೀಯ ಪಕ್ಷಗಳು ಮಾತಾಡುತ್ತವೆ ಎಂದು ಕುಳಿತರೆ ಏನೂ ಆಗಲ್ಲ. ಜನ ರಸ್ತೆಗೆ ಇಳಿಯಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿಯ ಶುದ್ಧೀಕರಣ ನಡೆಸಲಾಗುತ್ತಿದೆ ಎಂಬ ಭಾವನೆ ಯಾರಲ್ಲಾದರೂ ಇದ್ದರೆ ಅದನ್ನು ಮನಸ್ಸಿನಿಂದ ತೆಗೆದು ಹಾಕಬೇಕು ಎಂದರು.
ಮುಂದಿನ ದಿನಗಳಲ್ಲಿ ಈ ರೀತಿಯ ಚರ್ಚೆ ಸಂವಾದಕ್ಕೆ ಆಸ್ಪದ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆಗಸ್ಟ್ 15ರಂದು ಕೆಂಪು ಕೋಟೆ ಮೇಲೆ ಪ್ರಧಾನಿ ಧ್ವಜ ಹಾರಿಸುವರು. ಆದರೆ ಅದು ತ್ರಿವರ್ಣ ಧ್ವಜವಾಗಿರುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದರು.
ಈ ದೇಶದ ಶೇ 30ರಷ್ಟು ಜನರ ಬಳಿ ಅವರು ಭಾರತೀಯರೆಂಬುದಕ್ಕೆ ದಾಖಲೆಗಳೇ ಇಲ್ಲ. ಎಸ್‌ಐಆರ್ ಮೂಲಕ ಅವರಿಗೆ ದಾಖಲೆ ಕೇಳಿದರೆ ಅವರೆಲ್ಲಿಂದ ತರುತ್ತಾರೆ.ಶಿವಸುಂದರ್, ಚಿಂತಕ
ಪ್ರಜಾತಂತ್ರದಲ್ಲಿ ಸರ್ಕಾರ ಯಾವುದಿರಬೇಕೆಂದು ಜನ ನಿರ್ಧರಿಸಬೇಕು. ಆದರೆ ಜನರನ್ನು ಆಯ್ಕೆ ಮಾಡಬೇಕಾದ ಮತದಾರರು ಯಾರಿರಬೇಕೆಂದು ಎಸ್‌ಐಆರ್ ಮೂಲಕ ಸರ್ಕಾರ ನಿರ್ಧರಿಸುತ್ತಿದೆ.ಪರಕಾಲ ಪ್ರಭಾಕರ್, ಆರ್ಥಿಕ ತಜ್ಞ
ಈ ದೇಶದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಅದನ್ನು ರಕ್ಷಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ನಾವೇ ಹೋರಾಡಿ ನಾವೇ ಗೆಲ್ಲಬೇಕಾದ ಪರಿಸ್ಥಿತಿಗೆ ಸಜ್ಜುಗೊಳ್ಳಬೇಕಿದೆ.ತಾರಾ ರಾವ್, ಸದಸ್ಯೆ ‘ಎದ್ದೇಳು ಕರ್ನಾಟಕ’ ಕೇಂದ್ರ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.