ADVERTISEMENT

ಭಕ್ತರಿಂದ ಲಕ್ಷ ಬಿಲ್ವಾರ್ಚನೆ

ಲಾಡಗೇರಿ ಹಿರೇಮಠದಲ್ಲಿ ಶ್ರಾವಣ ಭಜನೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 13:32 IST
Last Updated 5 ಸೆಪ್ಟೆಂಬರ್ 2021, 13:32 IST
ಬೀದರ್‌ನ ಲಾಡಗೇರಿಯ ಹಿರೇಮಠ ಸಂಸ್ಥಾನದಲ್ಲಿ ನಡೆದ ಪರ್ವತಲಿಂಗ ಶಿವಾಚಾರ್ಯರ ಸ್ಮರಣೋತ್ಸವ ಹಾಗೂ ಶ್ರಾವಣ ಭಜನೆ ಸಮಾರೋಪ ಕಾರ್ಯಕ್ರಮದಲ್ಲಿ ಭಕ್ತರು ಶ್ರೀಗಳ ಕರ್ತೃ ಗದ್ದುಗೆಗೆ ಬಿಲ್ವಾರ್ಚನೆ ಮಾಡಿದರು
ಬೀದರ್‌ನ ಲಾಡಗೇರಿಯ ಹಿರೇಮಠ ಸಂಸ್ಥಾನದಲ್ಲಿ ನಡೆದ ಪರ್ವತಲಿಂಗ ಶಿವಾಚಾರ್ಯರ ಸ್ಮರಣೋತ್ಸವ ಹಾಗೂ ಶ್ರಾವಣ ಭಜನೆ ಸಮಾರೋಪ ಕಾರ್ಯಕ್ರಮದಲ್ಲಿ ಭಕ್ತರು ಶ್ರೀಗಳ ಕರ್ತೃ ಗದ್ದುಗೆಗೆ ಬಿಲ್ವಾರ್ಚನೆ ಮಾಡಿದರು   

ಬೀದರ್: ಪರ್ವತಲಿಂಗ ಶಿವಾಚಾರ್ಯರ 14ನೇ ಸ್ಮರಣೋತ್ಸವ ಹಾಗೂ ಶ್ರಾವಣ ಪ್ರಯುಕ್ತ ಇಲ್ಲಿಯ ಲಾಡಗೇರಿಯ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶಿವ ಭಜನೆ ಹಾಗೂ ಸಂಗೀತ ದರ್ಬಾರ್ ಸಮಾರೋಪಗೊಂಡಿತು.

ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀಗಳ ಕರ್ತುೃ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ, ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಾರ್ಥನೆ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ಪರ್ವತಲಿಂಗ ಶಿವಾಚಾರ್ಯರ ಸ್ಮರಣೋತ್ಸವ ಹಾಗೂ ಶ್ರಾವಣ ಪ್ರಯುಕ್ತ ಕೊರೊನಾ ಮುಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಠದಲ್ಲಿ 27 ದಿನಗಳ ಕಾಲ ನಿತ್ಯ ಶ್ರೀಗಳ ಕರ್ತುೃ ಗದ್ದುಗೆಗೆ ಅಭಿಷೇಕ, ಶಿವ ಭವನೆ, ಸಂಗೀತ ದರ್ಬಾರ್ ಮೊದಲಾದ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿವೆ ಎಂದು ಗಂಗಾಧರ ಶಿವಾಚಾರ್ಯರು ಹೇಳಿದರು.

ADVERTISEMENT

ಪರ್ವತಲಿಂಗ ಶಿವಾಚಾರ್ಯರು ಭಕ್ತರ ಉದ್ಧಾರಕ್ಕಾಗಿ ಬದುಕು ಸವೆಸಿದ್ದರು. ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಲಾವಿದರಾದ ನವಲಿಂಗ ಪಾಟೀಲ ಹಾಗೂ ರಾಚಯ್ಯ ಸ್ವಾಮಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಚನ್ನಬಸವ ಬಿಕ್ಲೆ ಹಾಗೂ ಸಂಗಡಿಗರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ವಿವಿಧೆಡೆಯ ಭಜನಾ ತಂಡಗಳಿಂದ ಭಜನೆ ಹಾಗೂ ರಾತ್ರಿ ಸಂಗೀತ ದರ್ಬಾರ್ ನಡೆಯಿತು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಪ್ರಮುಖರಾದ ಬಂಡೆಪ್ಪ ಗಿರಿ, ಮಲ್ಲಿಕಾರ್ಜುನ ಬಸಂತಪುರೆ, ಮಲ್ಲಪ್ಪ ಹುಲೆಪ್ಪನೋರ, ಕಂಟೆಪ್ಪ ಪಾಟೀಲ ಹಳ್ಳದಕೇರಿ, ನಾಗರಾಜ ಲಾಡಗೇರಿ, ಚಿತ್ರಮ್ಮ, ನಾಗಭೂಷಣ, ಓಂಪ್ರಕಾಶ ರೊಟ್ಟೆ, ವರದಯ್ಯ ಸ್ವಾಮಿ ಹಾಗೂ ಬಸವರಾಜ ಸ್ವಾಮಿ ಇದ್ದರು.

ಬೀದರ್ ಜಿಲ್ಲೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.