ADVERTISEMENT

ಕೇಕ್ ಕತ್ತರಿಸಿ ಸಿದ್ದರಾಮಯ್ಯ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 15:04 IST
Last Updated 12 ಆಗಸ್ಟ್ 2021, 15:04 IST
ಬೀದರ್‌ನಲ್ಲಿ ಗುರುವಾರ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿಯಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಲಾಯಿತು
ಬೀದರ್‌ನಲ್ಲಿ ಗುರುವಾರ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿಯಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಲಾಯಿತು   

ಬೀದರ್: ನಗರದ ಶ್ರೀ ಸಾಯಿ ಆದರ್ಶ ಪ್ರೌಢಶಾಲೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿಯಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 73ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ್ ಮಲ್ಕಾಪುರೆ ಅವರು ಜಂಟಿಯಾಗಿ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಯೋಜನೆಗಳ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಶ್ರಮಿಸಿದ್ದರು ಎಂದು ಅಮೃತರಾವ್ ಚಿಮಕೋಡೆ ಹೇಳಿದರು.

ADVERTISEMENT

ಸಿದ್ದರಾಮಯ್ಯ ದೂರದೃಷ್ಟಿಯ ನೇತಾರರಾಗಿದ್ದಾರೆ. ಅವರ ಅವಧಿಯಲ್ಲಿ ಜಾರಿಗೊಳಿಸಿದ ಅನೇಕ ಯೋಜನೆಗಳು ಅಸಂಖ್ಯಾತ ಜನರ ಬಾಳು ಬೆಳಗಿವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡೆ ಮಾತನಾಡಿ, ಕುರುಬ ಸಮುದಾಯಕ್ಕೆ ಎಸ್.ಟಿ. ಗೊಂಡ ಪ್ರಮಾಣಪತ್ರ ದೊರಕಿಸಿಕೊಟ್ಟ ಶ್ರೇಯ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜನಪರ ಕಾಳಜಿ ಅನುಕರಣೀಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಕಾಶೆಂಪೂರ್, ಕಲಬುರ್ಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಮುಖಂಡರಾದ ಮಾಳಪ್ಪ ಅಡಸಾರೆ, ಪಿ.ಎಸ್. ಇಟಕಂಪಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಶಾಲ ಹಾಸಗೊಂಡ, ಮಾಣಿಕ ಬರಿದಾಬಾದ್ ಇದ್ದರು.
ಓಂಕಾರ ಗಾದಗಿ ಸ್ವಾಗತಿಸಿದರು. ವಿಜಯಕುಮಾರ ಡುಮ್ಮೆ ನಿರೂಪಿಸಿದರು. ಗೊಂಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿ ಪರ ಸಂಘಟನೆಗಳ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.