ADVERTISEMENT

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ನಿಶ್ಚಿತ: ಎಚ್‌.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 16:18 IST
Last Updated 13 ಸೆಪ್ಟೆಂಬರ್ 2022, 16:18 IST
ಎಚ್.ಎಂ. ರೇವಣ್ಣ
ಎಚ್.ಎಂ. ರೇವಣ್ಣ   

ಬೀದರ್: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.


ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸಾಗರವನ್ನು ಕಂಡು ಬಿಜೆಪಿಗೆ ನಡುಕ ಉಂಟಾಗಿದೆ. ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಭೀತಿಯಿಂದ ಸಚಿವರು ಅವರ ವಿರುದ್ಧ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ ನೋಡೋಣ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ರೀತಿಯ ಸವಾಲು ಹಾಕುವ ಬದಲು ಅಭಿವೃದ್ಧಿ ಮಾಡಿ ತೋರಿಸಬೇಕು. ಬಿಜೆಪಿಯವರಿಗೆ ಭಾಷಣವೇ ಬಂಡವಾಳ ಆಗಿದೆ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ಇದೀಗ ರಾಜ್ಯದಲ್ಲಿ ಶೇ 40 ರಷ್ಟು ಕಮಿಷನ್ ಬಗ್ಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್, ಮುಖಂಡರಾದ ಅಮೃತರಾವ್ ಚಿಮಕೋಡೆ, ಆನಂದ ದೇವಪ್ಪ, ಮನ್ನಾನ್ ಸೇಠ್, ಶಂಕರ ದೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.