ADVERTISEMENT

ಬೀದರ್‌ ಲೋಕಸಭೆ ಕ್ಷೇತ್ರ: ಸಂಸತ್ತಿಗೆ ಒಮ್ಮೆಯೂ ಕಾಲಿಡದ ಜಿಲ್ಲೆಯ ಮಹಿಳೆ

ಬೀದರ್‌ ಲೋಕಸಭೆ ಕ್ಷೇತ್ರ: ರಾಷ್ಟ್ರೀಯ ಪಕ್ಷಗಳಿಂದ ಸತತ ಪುರುಷರಿಗಷ್ಟೇ ಮಣೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಮಾರ್ಚ್ 2024, 7:44 IST
Last Updated 20 ಮಾರ್ಚ್ 2024, 7:44 IST
ಸಾವಿತ್ರಿ
ಸಾವಿತ್ರಿ   

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಿಂದ ಇದುವರೆಗೆ ಒಂದು ಸಲವೂ ಮಹಿಳೆಯರಿಗೆ ಸಂಸತ್‌ ಪ್ರವೇಶಿಸುವ ಭಾಗ್ಯ ಒದಗಿ ಬಂದಿಲ್ಲ.

ಸ್ವಾತಂತ್ರ್ಯ ದೊರೆತ ನಂತರದಿಂದ ಇದುವರೆಗೆ ನಡೆದ ಯಾವ ಚುನಾವಣೆಯಲ್ಲೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿಲ್ಲ. ಎಲ್ಲ ಪಕ್ಷಗಳು ಪುರುಷರಿಗೇ ಆದ್ಯತೆ ಕೊಡುತ್ತ ಬಂದಿರುವುದರಿಂದ ಮಹಿಳೆಯರ ಪರ ಧ್ವನಿ ಎತ್ತುವ ಅವಕಾಶ ಈ ಭಾಗದ ಹೆಣ್ಣುಮಕ್ಕಳಿಗೆ ಒದಗಿ ಬಂದಿಲ್ಲ.

ಅಂದಹಾಗೆ, ಬೀದರ್‌ ಲೋಕಸಭೆ ಕ್ಷೇತ್ರವು ಒಂದು ಉಪಚುನಾವಣೆ ಸೇರಿದಂತೆ ಒಟ್ಟು 18 ಸಾರ್ವತ್ರಿಕ ಚುನಾವಣೆಗಳಿಗೆ ಸಾಕ್ಷಿಯಾಗಿದೆ. 11 ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಿದರೆ, 7 ಸಲ ಬಿಜೆಪಿ ಗೆದ್ದಿದೆ. 1951–52ರಲ್ಲಿ ಮೊದಲ ಸಲ ಲೋಕಸಭಾ ಚುನಾವಣೆಗೆ ಬೀದರ್‌ ಸಾಕ್ಷಿಯಾಯಿತು. ಅಚ್ಚರಿಯ ವಿಷಯ ಏನೆಂದರೆ ಆ ಚುನಾವಣೆಯಲ್ಲಿ ಅನ್ಯ ರಾಜ್ಯದವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಆಪ್ತ ಶೌಕತ್‌ ಉಲ್ಲಾ ಷಾ ಅನ್ಸಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅದರ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಪುರುಷರೇ ಸ್ಪರ್ಧಿಸಿದ್ದಾರೆ.

ADVERTISEMENT

1962, 1967ರಲ್ಲಿ ರಾಮಚಂದ್ರ ವೀರಪ್ಪನವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇಂದಿರಾ ಕಾಂಗ್ರೆಸ್ ಹಾಗೂ ಸಂಸ್ಥಾ ಕಾಂಗ್ರೆಸ್‌ ಇಬ್ಭಾಗವಾದ ನಂತರ ಅವರು ಸೋಲು ಕಂಡಿದ್ದರು.

1971ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ (ಐ) ಸ್ಪರ್ಧಿಸಿದ್ದ ಶಂಕರದೇವ ಬಾಲಾಜಿ ಅವರು ದಾಖಲೆಯ ಮತಗಳಿಂದ ಜಯ ಗಳಿಸಿದ್ದು ವಿಶೇಷ. ಅವರು ತಮ್ಮ ಪ್ರತಿಸ್ಪರ್ಧಿ ಸಂಸ್ಥಾ ಕಾಂಗ್ರೆಸ್ಸಿನ ರಾಮಚಂದ್ರ ವೀರಪ್ಪನವರನ್ನು ಮಣಿಸಿದ್ದರು. ಆ ಚುನಾವಣೆಯಲ್ಲಿ ಒಟ್ಟು 2,71,685 ಮತಗಳಲ್ಲಿ ಶಂಕರದೇವ ಅವರು 2,07,423 ಮತಗಳನ್ನು ಗಳಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 76.34ರಷ್ಟು ಮತಗಳು ಶಂಕರದೇವ ಅವರಿಗೆ ಬಿದ್ದಿದ್ದವು. ರಾಮಚಂದ್ರ ವೀರಪ್ಪನವರಿಗೆ ಶೇ 20.16 ಮತಗಳಷ್ಟೇ ಬಿದ್ದಿದ್ದವು. 1977ರಲ್ಲಿ ನಡೆದ ಚುನಾವಣೆಯಲ್ಲಿ ರಾಮಚಂದ್ರ ಅವರನ್ನು ಮಣಿಸಿ ಶಂಕರದೇವ ಜಯಭೇರಿ ಬಾರಿಸಿದ್ದರು. 1980ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ನರಸಿಂಗ್‌ರಾವ್‌ ಸೂರ್ಯವಂಶಿ ಅವರು ಜನತಾ ಪಕ್ಷದ ಶಂಕರದೇವ ಅವರನ್ನು ಸೋಲಿಸಿದ್ದರು. ನಂತರ ನಡೆದ ಎರಡೂ ಸಾರ್ವತ್ರಿಕ ಚುನಾವಣೆಗಳಲ್ಲಿ, 1984, 1989ರಲ್ಲೂ ಸೂರ್ಯವಂಶಿ ಜಯ ಗಳಿಸಿದ್ದರು. ಆನಂತರದ ಐದು ಚುನಾವಣೆಗಳಲ್ಲಿ ಸತತವಾಗಿ ರಾಮಚಂದ್ರ ವೀರಪ್ಪನವರು ಜಯ ಕಂಡಿದ್ದರು.

1991, 1996, 1998, 1999 ಮತ್ತು 2004ರಲ್ಲಿ ರಾಮಚಂದ್ರ ವೀರಪ್ಪ ಗೆದ್ದು ಸಂಸತ್‌ ಪ್ರವೇಶಿಸಿದ್ದರು. ಕಾಂಗ್ರೆಸ್‌ನಿಂದ ಎರಡು ಸಲ, ಬಿಜೆಪಿಯಿಂದ ಐದು ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. ‘ಎಂಪಿ ರಾಮಚಂದ್ರ ವೀರಪ್ಪ’ ಎಂದೇ ಅವರು ಜನಜನಿತರಾಗಿದ್ದರು. 2004ರಲ್ಲಿ ಅವರು ನಿಧನರಾದರು. ಆಗ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ನರಸಿಂಗ್‌ರಾವ್ ಸೂರ್ಯವಂಶಿ ಆಯ್ಕೆಯಾಗಿದ್ದರು.

2008ರ ಚುನಾವಣೆಯೂ ದೊಡ್ಡ ಪಲ್ಲಟಕ್ಕೆ ಸಾಕ್ಷಿಯಾಯಿತು. ಮೊದಲ ಬಾರಿಗೆ ಕ್ಷೇತ್ರದ ಮತದಾರರು ಹೊರಗಿನವರಿಗೆ ಮಣೆ ಹಾಕಿದರು. ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್ ಅವರು ಕಾಂಗ್ರೆಸ್‌ನಿಂದ ಜಯ ಸಾಧಿಸಿದ್ದರು. 2014, 2019ರಲ್ಲಿ ನಡೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯ ಭಗವಂತ ಖೂಬಾ ಆಯ್ಕೆಯಾಗಿ ಬಂದರು. ಮೊದಲ ಚುನಾವಣೆಯಲ್ಲಿ ಎನ್‌. ಧರ್ಮಸಿಂಗ್‌, 2019ರಲ್ಲಿ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದರು. ಅಷ್ಟೇ ಅಲ್ಲ, ಕೇಂದ್ರದಲ್ಲಿ ಮಂತ್ರಿಯೂ ಆದರು. ಈಗ ಮೂರನೇ ಸಲ ಬಿಜೆಪಿಯಿಂದ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಅಥವಾ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್‌ ಖಂಡ್ರೆಯವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌, ಬಿಜೆಪಿಗೆ ಬೆಂಬಲ ಘೋಷಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ಈ ಸಲದ ಚುನಾವಣೆಯಲ್ಲೂ ಪ್ರಮುಖ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯುವುದಿಲ್ಲ ಎನ್ನುವುದು ಖಚಿತವಾಗಿದೆ.

ಪೂರ್ಣಿಮಾ ಜಾರ್ಜ್‌

ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಶೇ 33ರಷ್ಟು ಮೀಸಲಾತಿ ಬಾಯಿಮಾತಿಗೆ ಸೀಮಿತವಾಗಿದೆ.

–ಪೂರ್ಣಿಮಾ ಜಾರ್ಜ್‌ ಶಿಕ್ಷಣ ತಜ್ಞೆ

ಚುನಾವಣೆಯಷ್ಟೇ ಅಲ್ಲ ಇತರೆ ರಂಗಗಳಲ್ಲಿಯೂ ಮಹಿಳೆಯರನ್ನು ಸತತವಾಗಿ ಕಡೆಗಣಿಸುತ್ತ ಬರಲಾಗಿದೆ. ಈ ವ್ಯವಸ್ಥೆ ಬದಲಾಗುವ ಅಗತ್ಯವಿದೆ

–ಸಾವಿತ್ರಿ ಸಾಮಾಜಿಕ ಹೋರಾಟಗಾರ್ತಿ

ಪಕ್ಷೇತರರಾಗಿ ಸ್ಪರ್ಧೆ

ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಮಣೆ ಹಾಕದ ಕಾರಣ ಮಹಿಳೆಯರು ಸ್ವಂತ ಬಲದ ಮೇಲೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಮತದಾರರು ಅವರ ಪರ ಒಲವು ತೋರದ ಕಾರಣ ಸಂಸತ್ತಿಗೆ ಹೋಗಲು ಸಾಧ್ಯವಾಗಿಲ್ಲ. ಶಿವಕಾಂತಾ ಚತುರೆ ಅವರು 1989ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 1991ರಲ್ಲಿ ಮಹಾದೇವಿ ಶಂಕರ್‌ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. 1996ರಲ್ಲಿ ನಾಲ್ವರು ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದು ವಿಶೇಷ. ಅನ್ನಪೂರ್ಣಬಾಯಿ ಶೋಭಾ ನಾಯಕ ಮಹಾದೇವಿ ಹಾಗೂ ಶಾಂತಾಬಾಯಿ ರಾಥೋಡ್‌ ಸ್ಪರ್ಧಿಸಿ ಸೋತಿದ್ದರು. ಆನಂತರ 2014ರ ವರೆಗೆ ನಡೆದ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸಲು ಆಸಕ್ತಿ ತೋರಲಿಲ್ಲ. 2014 ಚುನಾವಣೆಯಲ್ಲಿ ಕಲಬುರಗಿಯ ಶ್ಯಾಮಲಾಬಾಯಿ ಸ್ಪರ್ಧಿಸಿ ಸೋಲು ಕಂಡಿದ್ದರು. 2019ರ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.