ಬೀದರ್: ‘ಜಿಲ್ಲೆಯಾದ್ಯಂತ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಎಲ್ಲಾ ವರ್ಗಗಳ/ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮೀಕ್ಷೆಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ವಹಿಸಿ ಮಾತನಾಡಿದರು.
ಎಲ್ಲಾ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಕೈಗೊಳ್ಳಲಾಗುವುದು. ಸಮೀಕ್ಷೆಗಾಗಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್ ಗಳಿಂದ ಜಿಲ್ಲಾ ಮಟ್ಟದಲ್ಲಿ ಮಾಸ್ಟರ್ ಟ್ರೈನರ್ ತರಬೇತಿ ಆಯೋಜಿಸಲಾಗುವುದು ಎಂದರು.
ಸರ್ಕಾರಿ ಶಿಕ್ಷಕರನ್ನು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳನ್ನು ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಾಗಿ ನಿಯೋಜಿಸಲಾಗುವುದು. ಸಮೀಕ್ಷೆದಾರರ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.
90 ಮಾಸ್ಟರ್ ಟ್ರೈನರ್ ಗಳು, 450 ಮೇಲ್ವಿಚಾರಕರು, 4,400 ಸಮೀಕ್ಷೆದಾರರು ಸಮೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯಲ್ಲಿ 3.40 ಮನೆಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ ಮತ್ತು ತಾಂಡಾಗಳಲ್ಲಿ ಸಮೀಕ್ಷೆ ನಡೆಯಲಿದೆ. ಯಾರೇ ಜಿಲ್ಲೆಯಲ್ಲಿ ವಾಸಿಸಲಿ ಅವರ ಸಂಪೂರ್ಣ ಮತ್ತು ಸ್ಪಷ್ಟ ಮಾಹಿತಿ ಕಲೆ ಹಾಕಬೇಕು ಎಂದು ಸೂಚಿಸಿದರು.
ಈಗಾಗಲೇ ಇಂಧನ ಇಲಾಖೆಯಿಂದ ಮೀಟರ್ ರೀಡರ್ ಮೂಲಕ ಮನೆಗೆ UHID ವಿವರದೊಂದಿಗೆ ಸ್ಟಿಕ್ಕರ್ ಅಂಟಿಸಲು ಕ್ರಮ ಜರುಗಿಸಲಾಗಿದೆ. ಜಿಯೋ ಟ್ಯಾಗ್ ಕೂಡ ಮಾಡಲಾಗಿದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಮೂಲಕ ಸಮೀಕ್ಷಾ ನಮೂನೆಗಳನ್ನು ಮನೆ ಮನೆಗೆ ವಿತರಿಸಿ ಅರಿವು ಮೂಡಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮುಹಮ್ಮದ್ ಶಕೀಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸುನೀತಾ ಶಿವಾನಂದ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.