ADVERTISEMENT

1200 ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:48 IST
Last Updated 26 ಜನವರಿ 2020, 14:48 IST
ಬೀದರ್‌ನ ಪೊಲೀಸ್‌ ಕವಾಯತ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಪರೇಡ್‌ ವೀಕ್ಷಣೆ ಮಾಡಿದರು
ಬೀದರ್‌ನ ಪೊಲೀಸ್‌ ಕವಾಯತ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಪರೇಡ್‌ ವೀಕ್ಷಣೆ ಮಾಡಿದರು   

ಬೀದರ್: ‘ಜಿಲ್ಲೆಯ ಔರಾದ್‌ ತಾಲ್ಲೂಕಿನ 1200 ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಿಸಿದರು.

ಇಲ್ಲಿಯ ಪೊಲೀಸ್‌ ಕವಾಯತ್ ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸೋಲಾರ್‌ ಪಾರ್ಕ್‌ಗೆ ಅಗತ್ಯ ಜಮೀನು ಒದಗಿಸಿದರೆ ನೆರವು ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಜಾಗ ಗುರುತಿಸಿದ್ದಾರೆ. 1200 ಎಕರೆ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಸೋಲಾರ್ ಪಾರ್ಕ್‌ಗೆ ಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸೋಲಾರ್‌ ಪಾರ್ಕ್‌ ನಿರ್ಮಾಣವಾದಲ್ಲಿ ಜಿಲ್ಲೆಯ ನಿರುದ್ಯೋಗಿಗಳು ಉದ್ಯೋಗ ಅರೆಸಿ, ಮುಂಬೈ, ಪುಣೆ ಹಾಗೂ ಹೈದರಾಬಾದ್‌ಗೆ ಹೋಗುವುದು ತಪ್ಪಲಿದೆ. ಸ್ವಂತ ಊರಲ್ಲೇ ಜನರಿಗೆ ಉದ್ಯೋಗ ದೊರೆಯಲಿದೆ’ ಎಂದು ಹೇಳಿದರು.

‘ಬೀದರ್‌–ಔರಾದ್‌ ನಡುವಿನ ಹೆದ್ದಾರಿ ₹ 336 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಲಿದೆ. ಕಾಮಗಾರಿ ಆರಂಭಿಸಲು ಇದ್ದ ಎಲ್ಲ ತೊಡಕುಗಳನ್ನು ನಿವಾರಿಸಲಾಗಿದೆ. ಸಂಸದ ಭಗವಂತ ಖೂಬಾ ಹಾಗೂ ನಾನು ಔರಾದ್‌ ತಾಲ್ಲೂಕಿನವರೇ ಹೀಗಾಗಿ ಹೆದ್ದಾರಿ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದೇವೆ’ ಎಂದು ತಿಳಿಸಿದರು.

‘ಬೀದರ್‌ನಿಂದ ಅನೇಕ ರೈಲು ಗಾಡಿಗಳನ್ನು ಓಡಿಸುವ ಮೂಲಕ ಸಂಸದರು ಸಾರಿಗೆ ಸಂಪರ್ಕದ ಸುಧಾರಣೆಗೆ ಒತ್ತು ನೀಡಿದ್ದಾರೆ. ಔರಾದ್‌ ಮಾರ್ಗವಾಗಿ ಬೀದರ್‌–ನಾಂದೇಡ್‌ ರೈಲು ಆರಂಭವಾಗಬೇಕಿದೆ. ಈ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ. ಬೀದರ್‌ಗೆ ಈಗಾಗಲೇ ಒಂದು ಎಂಜಿನಿಯರಿಂಗ್‌ ಕಾಲೇಜು ಮಂಜೂರು ಆಗಿದೆ. ಕೃಷಿ ಕಾಲೇಜನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯ ಬಹುಜನರ ಕನಸಾದ ವಿಮಾನಯಾನಕ್ಕೆ ಫೆಬ್ರುವರಿ 7 ರಂದು ಚಾಲನೆ ದೊರೆಯಲಿದೆ. ಅದೇ ದಿನ ಬೀದರ್‌ ತಾಲ್ಲೂಕಿನ ಕಮಠಾಣಾ ಬಳಿ ರಾಜ್ಯಮಟ್ಟದ ಪಶು ಮೇಳ ಆಯೋಜಿಸಲಾಗಿದ್ದು, 30 ಜಿಲ್ಲೆಗಳ ರಾಸು ತಳಿಗಳ ಪ್ರದರ್ಶನ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ಇದಕ್ಕೂ ಮೊದಲು ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌ ಪಡೆ, ಗೃಹರಕ್ಷಕ ದಳ, ಮಹಿಳಾ ಪೊಲೀಸ್‌, ಎನ್‌ಸಿಸಿ ಸ್ಕೌಟ್‌ ಮತ್ತು ಗೈಡ್ಸ್‌ ಪರೇಡ್‌ ವೀಕ್ಷಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ರಹೀಂಖಾನ್‌,  ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡಿ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ, ಬೀದರ್ ತಹಶೀಲ್ದಾರ್ ಕೀರ್ತಿ ಚಾಲಕ ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.