ADVERTISEMENT

ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ: ಎಸ್‌ಎಫ್‌ಐ ಜಿಲ್ಲಾ ಘಟಕ ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:21 IST
Last Updated 10 ಜೂನ್ 2021, 17:21 IST

ಬೀದರ್‌: ರಾಜ್ಯದಲ್ಲಿ ಪ್ರಸ್ತುತ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಶಿಕ್ಷಣ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಘಟಕದ ಒತ್ತಾಯಿಸಿದೆ.

ಉತ್ತರಪ್ರದೇಶ, ಹರಿಯಾಣ, ಆಂಧ್ರಪ್ರದೇಶದಲ್ಲಿ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿಯುಸಿಯಂತೆ ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪರೀಕ್ಷೆಗಳನ್ನು ರದ್ದುಪಡಿಸಬೇಕು. ಡಿಪ್ಲೊಮಾ 1, 3 ಹಾಗೂ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್‌ ಮಾಡಬೇಕು ಎಂದು ಆಗ್ರಹಿಸಿದೆ.

ಪದವಿಯ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ನಡೆಸದೇ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಲಾಗಿದೆ. ಮುಂದಿನ ಪರೀಕ್ಷಾ ತಯಾರಿ ಯಾವ ಸೆಮಿಸ್ಟರ್‌ಗಾಗಿ ಮಾಡಬೇಕು ಎನ್ನುವ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿದೆ. ಹೀಗಾಗಿ ಹಿಂದಿನ ಸೆಮಿಸ್ಟರ್‌ ಪಾಸ್‌ ಮಾಡಿದ ನಂತರ ಮುಂದಿನ ತರಗತಿಗಳನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

ADVERTISEMENT

ಎರಡು ವರ್ಷಗಳ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ನಡೆದಿಲ್ಲ. ಆನ್‍ಲೈನ್ ಕ್ಲಾಸ್‍ಗಳನ್ನು ನಡೆಸಲಾಗುತ್ತಿದೆ ಆದರೂ ಪ್ರಾಯೋಗಿಕ ಅಭ್ಯಾಸಗಳು ಪ್ರಯೋಗ ಅಭ್ಯಾಸವಿಲ್ಲದೆ ಅರ್ಥವಾಗುವುದಿಲ್ಲ. ಇದು ಪ್ರಾಯೋಗಿಕ ವಿಷಯದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದೆ.

ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೊಡಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು. ಉಪಾಧ್ಯಕ್ಷ ಅಮರ್ ಗಾದಗಿ, ಕಾರ್ಯದರ್ಶಿ ಅವಿನಾಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.