ADVERTISEMENT

ಬೀದರ್‌: ಮಾರುಕಟ್ಟೆಯಲ್ಲಿ ಕುಸಿದ ಸೋಯಾ ಅವರೆ ಬೆಲೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಫೆಬ್ರುವರಿ 2025, 7:56 IST
Last Updated 3 ಫೆಬ್ರುವರಿ 2025, 7:56 IST
ಬೀದರ್‌ನ ಗಾಂಧಿ ಗಂಜ್‌ನಲ್ಲಿ ರೈತರು ಮಾರಾಟಕ್ಕೆ ತಂದಿರುವ ಸೋಯಾಬೀನ್‌ ಕಾಳು ಕೊಂಪೆ ಹಾಕಿರುವುದು
ಬೀದರ್‌ನ ಗಾಂಧಿ ಗಂಜ್‌ನಲ್ಲಿ ರೈತರು ಮಾರಾಟಕ್ಕೆ ತಂದಿರುವ ಸೋಯಾಬೀನ್‌ ಕಾಳು ಕೊಂಪೆ ಹಾಕಿರುವುದು   

ಬೀದರ್‌: ದಿಢೀರನೆ ಮಾರುಕಟ್ಟೆಯಲ್ಲಿ ಸೋಯಾಬೀನ್‌ ಬೆಲೆ ಕುಸಿದಿರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ಬಂಪರ್‌ ಫಸಲು ತೆಗೆದ ರೈತರು ಬೆಲೆ ಇಳಿದಿರುವುದರಿಂದ ಅದನ್ನೇನು ಮಾಡಬೇಕೆಂಬ ಯೋಚನೆಯಲ್ಲಿದ್ದಾರೆ. ನಿತ್ಯ ಕೆಲವರು ಮಾರುಕಟ್ಟೆಗೆ ಹೋಗಿ ಬೆಲೆ ವಿಚಾರಿಸಿಕೊಂಡು ಹೋಗುವುದೇ ಕಾಯಕವಾಗಿದೆ. ಇಂದಲ್ಲ, ನಾಳೆ ಸೂಕ್ತ ಬೆಲೆ ಸಿಗಬಹುದು ಎಂಬ ಲೆಕ್ಕಾಚಾರ ದಿನ ಕಳೆದಂತೆ ಹುಸಿಯಾಗುತ್ತಿದೆ. ಇನ್ನು, ಕೆಲವರು ಗಾಂಧಿ ಗಂಜ್‌ಗೆ ವಾಹನಗಳಲ್ಲಿ ಸೋಯಾ ಕಾಳು ತಂದು, ಸುರಿದು ಕೊಂಪೆ ಹಾಕಿದ್ದಾರೆ. ಸೂಕ್ತ ಬೆಲೆ ಸಿಗುವವರೆಗೆ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ. ಆದರೆ, ಬೇಗನೆ ಮಾರಾಟ ಮಾಡಿ, ಇಲ್ಲವಾದರೆ ಸರಕು ಕೊಂಡೊಯ್ಯಬೇಕು ಎಂದು ವರ್ತಕರು ಒತ್ತಡ ಹೇರುತ್ತಿರುವುದರಿಂದ ಸಮಸ್ಯೆಗೆ ಒಳಗಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬೀದರ್‌ ಜಿಲ್ಲೆಯಾದ್ಯಂತ ಸೋಯಾಬೀನ್‌ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರು ಬೆಳೆಯುತ್ತಿದ್ದಾರೆ. 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಅವರೆ ಬೆಳೆದಿದ್ದಾರೆ. ಉತ್ತಮ ಮಳೆಯಾಗಿರುವುದರಿಂದ ಚೆನ್ನಾಗಿ ಇಳುವರಿ ಬಂದಿದೆ. ಹಲವರು ತಡವಾಗಿ ಬಿತ್ತನೆ ಮಾಡಿರುವುದರಿಂದ ಬೆಳೆ ಕೂಡ ಸಹಜವಾಗಿಯೇ ತಡವಾಗಿ ಕೈಸೇರಿದೆ.

ADVERTISEMENT

ನವೆಂಬರ್‌ನಲ್ಲಿಯೇ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸೋಯಾ ಖರೀದಿ ಪ್ರಕ್ರಿಯೆ ಆರಂಭಿಸಿತ್ತು. ಪ್ರತಿ ಕ್ವಿಂಟಲ್‌ಗೆ ₹4,892 ಬೆಲೆ ನಿಗದಿಪಡಿಸಿತ್ತು. ರೈತರ ಒತ್ತಾಯದ ಮೇರೆಗೆ ಎರಡು ಸಲ ದಿನಾಂಕ ವಿಸ್ತರಿಸಿತ್ತು. ಜನವರಿ 2ರಂದು ಖರೀದಿ ಪ್ರಕ್ರಿಯೆ ಕೊನೆಗೊಂಡಿದೆ. ಹೆಚ್ಚಿನ ರೈತರು ಹೆಸರು ನೋಂದಣಿ ಮಾಡಿಸಿ, ಸೋಯಾ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ತಡವಾಗಿ ಫಸಲು ಕೈಸೇರಿದ ರೈತರು ಈಗ ರಾಶಿ ಮಾಡಿ ಮಾರುಕಟ್ಟೆಗೆ ಕಾಳು ತೆಗೆದುಕೊಂಡು ಹೋಗುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿ ಸೋಯಾ ಬರುತ್ತಿರುವುದರಿಂದ ಬೆಲೆ ಕುಸಿತ ಕಂಡಿದೆ.

ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ₹500ರಿಂದ ₹600 ಕಡಿಮೆ ಬೆಲೆಗೆ ರೈತರು ವರ್ತಕರಿಗೆ ಕಾಳು ಮಾರಾಟ ಮಾಡುತ್ತಿದ್ದರು. ಈಗ ₹700ರಿಂದ ₹1,000ದ ವರೆಗೆ ಬೆಲೆ ಕುಸಿದಿದೆ. ಇದರಿಂದ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

‘ಎರಡು ದಿನಗಳ ಹಿಂದೆ ಪ್ರತಿ ಕ್ವಿಂಟಲ್‌ ಸೋಯಾಬೀನ್‌ ಬೆಲೆ ₹4,200 ಇತ್ತು. ಶನಿವಾರ (ಫೆ.1) ಆ ಬೆಲೆಗೆ ಮಾರಾಟ ಮಾಡಲೆಂದು 100 ಕ್ವಿಂಟಲ್‌ ಕಾಳು ತೆಗೆದುಕೊಂಡು ಮಾರುಕಟ್ಟೆಗೆ ಹೋಗಿದ್ದೆ. ಆದರೆ, ಪ್ರತಿ ಕ್ವಿಂಟಲ್‌ ಕಾಳು ₹3,500ಕ್ಕೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟ ಇರದಿದ್ದರೆ ಇನ್ನೂ ಕಡಿಮೆ ಕೇಳುತ್ತಿದ್ದಾರೆ. ಏನು ಮಾಡಬೇಕು ದಿಕ್ಕು ತೋಚುತ್ತಿಲ್ಲ’ ಎಂದು ಇಸ್ಲಾಂಪೂರದ ರೈತ ಸಂತೋಷಕುಮಾರ ಎಸ್‌. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೆಂಬಲ ಬೆಲೆ ಯೋಜನೆಯಡಿ ಕಾಳು ಖರೀದಿಸುವ ಅಂತಿಮ ದಿನಾಂಕ ಫೆಬ್ರುವರಿ ಮಧ್ಯದ ವರೆಗೆ ವಿಸ್ತರಿಸಬೇಕೆಂದು ಸರ್ಕಾರ ಹಾಗೂ ಸಚಿವರಿಗೆ ಹಲವು ಸಲ ಮನವಿ ಮಾಡಿದ್ದೇವೆ. ಆದರೆ, ಅವರು ಕಿವಿಗೆ ಹಾಕಿಕೊಂಡಿಲ್ಲ. ಈಗ ರೈತರಿಗೆ ತೊಂದರೆಯಾಗಿದೆ. ರೈತರಿಗೆ ನ್ಯಾಯ ಕೊಡಿಸದಿದ್ದರೆ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಸೋಯಾಬೀನ್‌ ಕಾಳು ಖರೀದಿಗಾಗಿ ಎರಡು ಸಲ ದಿನಾಂಕ ವಿಸ್ತರಿಸಿ ರೈತರಿಗೆ ಅವಕಾಶ ನೀಡಲಾಗಿತ್ತು. ತಡವಾಗಿ ಫಸಲು ಬಂದ ರೈತರಿಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಸಮಸ್ಯೆಯಾಗಿದೆ.
–ಜಿಲ್ಲಾವುಲ್ಲಾ ಖಾನ್‌ ಜಂಟಿ ಕೃಷಿ ನಿರ್ದೇಶಕ
ಅನೇಕ ರೈತರು ಈಗ ಮಾರುಕಟ್ಟೆಗೆ ಸೋಯಾಬೀನ್‌ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಸೂಕ್ತ ಬೆಲೆ ಅವರಿಗೆ ಸಿಗುತ್ತಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ ತೋರಿಸುತ್ತದೆ. ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ.
–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಸೋಯಾಬೀನ್‌ ಕಾಳು ರೈತರಿಂದ ಬಹಳ ಕಡಿಮೆ ದರಕ್ಕೆ ವರ್ತಕರು ಖರೀದಿಸಿ ವಂಚಿಸುತ್ತಿದ್ದಾರೆ. ಕೂಡಲೇ ಅದಕ್ಕೆ ಕಡಿವಾಣ ಹಾಕಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. –
ಸಂತೋಷಕುಮಾರ ಎಸ್‌. ಪಾಟೀಲ ರೈತ ಇಸ್ಲಾಂಪೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.