ADVERTISEMENT

ಧಾರ್ಮಿಕ ಕೇಂದ್ರಗಳು ಜಾಗೃತವಾದರೆ ಅಭಿವೃದ್ಧಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಬಸವಕಲ್ಯಾಣ: ಯುವ ಸಂಸತ್ತಿನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 9:12 IST
Last Updated 16 ಫೆಬ್ರುವರಿ 2020, 9:12 IST
ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು
ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು   

ಬಸವಕಲ್ಯಾಣ: ‘ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳು ಜಾಗೃತರಾಗಿ ಸಂಸ್ಕೃತಿ, ಪರಂಪರೆಯ ಸಂರಕ್ಷಣೆಗೆ ಯುವಕರಿಗೆ ಪ್ರೇರಣೆ ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಕಾಸ ಅಕಾಡೆಮಿ, ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಶ್ರಯದಲ್ಲಿ ಶನಿವಾರ ಇಲ್ಲಿನ ತೇರು ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಯುವ ಸಂಸತ್ತು-ಯುವಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಯುವ ಶಕ್ತಿ ದೇಶದ ದೊಡ್ಡ ಶಕ್ತಿ. ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್, ವೀರ ಸಾವರಕರ್ ಮುಂತಾದವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಾಡುವಲ್ಲಿ, ಗೋಹತ್ಯೆ ತಡೆಯುವಲ್ಲಿ ಯುವ ಜನತೆ ಸಾಕಷ್ಟು ಶ್ರಮಿಸಿತು. ನಾನು ಶಿಕ್ಷಣ ಸಚಿವನಾಗಿದ್ದಾಗ ಯೋಗ ಶಿಕ್ಷಣ ಹಾಗೂ ಶಾಲೆಗಳಲ್ಲಿ ಭಗವದ್ಗೀತೆ ಓದುವುದು ಕಡ್ಡಾಯಗೊಳಿಸಿದೆ. ಕೆಲವರು ಶಿಕ್ಷಣದ ಕೇಸರಿಕರಣ ಅಗುತ್ತಿದೆ ಎಂದು ದೂರಿದರಾದರೂ ನನ್ನ ಪ್ರಯತ್ನವನ್ನು ಬಿಡಲಿಲ್ಲ’ ಎಂದರು.

ADVERTISEMENT

‘12 ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ಜಾತಿ, ಸಮುದಾಯದ ಶರಣರನ್ನು ಒಗ್ಗೂಡಿಸಿ ಅನುಭವ ಮಂಟಪ ಕಟ್ಟಿದರು. ಅದು ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆ ಪಡೆಯಿತು. ಅದರಂತೆ ಈಗ ಇಲ್ಲಿ ನಡೆಯುತ್ತಿರುವ ಯುವ ಸಂಸತ್ತು ಯುವ ಜನತೆಗೆ ರಾಷ್ಟ್ರ ಕಟ್ಟುವುದಕ್ಕೆ ಪ್ರೇರಣೆ ನೀಡಲಿ’ ಎಂದರು.

ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಜೀವನ ಮತ್ತು ಸಾವಿನ ಮಧ್ಯದ ಅವಧಿಯಲ್ಲಿ ಉತ್ತಮ ಆಯ್ಕೆ ಮಾಡಿಕೊಂಡು ಬದುಕಬೇಕು. ಯುವಕರ ಕೈಗಳು ಬೇಡುವ ಕೈ ಅಲ್ಲ. ಕೊಡುವ ಕೈ ಆಗಬೇಕಾಗಿದೆ. ಶ್ರಮದ ಹಣ ಸಂಪಾದಿಸಬೇಕು. ಕಣ್ಣೀರು ಹಾಕಿದವರಿಂದ ಕಸಿದುಕೊಳ್ಳುವ ಪ್ರವೃತ್ತಿ ಹೋಗಬೇಕು’ ಎಂದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ಶಿಕ್ಷಣದ ಗುರಿ ಉದ್ಯೋಗ ಆಗಿದ್ದರೂ, ಜೀವನದ ಗುರಿ ಉದಾತ್ತವಾಗಿರಬೇಕು. ಜೀವನದಲ್ಲಿ ತೃಪ್ತಿ ಇರಬೇಕು. ಯುವ ಜನತೆ ಯಾವುದೇ ಕೆಲಸ ಕಾರ್ಯರೂಪಕ್ಕೆ ತರುವ ಶಕ್ತಿ ಹೊಂದಿದ್ದರಿಂದ ಯುವಕರ ಸಂಸತ್ತು ಆಯೋಜಿಸಲಾಗಿದೆ. ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.

ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, `ಹೈದರಾಬಾದ್ ಕರ್ನಾಟಕ ಎಂದಾಗ ಈ ಭಾಗ ಹಿಂದುಳಿದಿದೆ ಎಂಬ ಭಾವನೆ ಮನದಲ್ಲಿ ಸುಳಿದಾಡುತ್ತಿತ್ತು. ಆದರೆ, ಈಚೆಗೆ ಇದನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದರಿಂದ ಅಂಥ ಭಾವನೆ ಬರುತ್ತಿಲ್ಲ’ ಎಂದರು.

ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ರೇವಣಸಿದ್ದಪ್ಪ ಜಲಾದೆ, ಶಿವಶಂಕರ ತರನಳ್ಳಿ ಮಾತನಾಡಿದರು.

ಶಾಸಕ ಬಿ.ನಾರಾಯಣರಾವ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಸೂರ್ಯಕಾಂತ ನಗಮಾರಪಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುಂಡುರೆಡ್ಡಿ, ಸುಧೀರ ಕಾಡಾದಿ, ಸುನಿಲ ಪಾಟೀಲ, ಶರಣು ಸಲಗರ, ಶಿವರಾಜ ನರಶೆಟ್ಟಿ, ಅನಿಲಕುಮಾರ ರಗಟೆ, ಪ್ರದೀಪ ವಾತಡೆ, ಎಸ್.ಪಿ.ಬಿರಾದಾರ, ಶಿವಕುಮಾರ ಬಿರದಾರ ಇದ್ದರು. ಪ್ರಮುಖ ಸ್ಥಳಗಳ ಭಾವಚಿತ್ರ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.