
ಹುಲಸೂರ: ‘ಮಾನವ ಜೀವನ ಉಜ್ವಲವಾಗಲು ಹಾಗೂ ಸುಖ–ಶಾಂತಿ ಸಾಧಿಸಲು ಅಧ್ಯಾತ್ಮದ ಅರಿವು ಮತ್ತು ಅದರ ಆಚರಣೆ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಇಂದಿನ ಮಾನವನ ಬದುಕು ಒತ್ತಡಗಳಿಂದ ತುಂಬಿದ್ದು, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರು ಧರ್ಮದಿಂದ ಫಲ ಬಯಸುತ್ತಾರೆ. ಆದರೆ ಅದರ ಪಾಲನೆಗೆ ಮುಂದಾಗುವುದಿಲ್ಲ. ಇದರ ಪರಿಣಾಮವಾಗಿ ಜೀವನ ಅಸಮಾಧಾನ ಮತ್ತು ಅತೃಪ್ತಿಯಿಂದ ಕೂಡಿದೆ’ ಎಂದು
ಅಭಿಪ್ರಾಯಪಟ್ಟರು.
ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಇಷ್ಟಲಿಂಗ ಪೂಜೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ನಮ್ಮ ಆತ್ಮಶುದ್ಧಿಗೆ ದಾರಿ ತೋರುವ ಸಾಧನೆ. ಪ್ರತಿಯೊಬ್ಬ ಭಕ್ತನೂ ತನ್ನ ಜೀವನದಲ್ಲಿ ವೀರಶೈವ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸಹಿಷ್ಣುತೆ, ಮತ್ತು ನೈತಿಕ ಮೌಲ್ಯಗಳ ಸ್ಥಾಪನೆಗಾಗಿ ವೀರಶೈವ ಧರ್ಮವು ಒಂದು ಬೆಳಕಿನ ದಾರಿಯಾಗಿದೆ. ಧರ್ಮದಲ್ಲಿ ಬದ್ಧತೆ ಮತ್ತು ಭಕ್ತಿಯಲ್ಲಿ ಶುದ್ಧತೆ ಇದ್ದರೆ, ಜೀವನ ಉಜ್ವಲವಾಗುತ್ತದೆ’ ಎಂದರು.
ಮೇಹಕರದ ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು. ಗೋರ್ಟಾ ಗ್ರಾಮದ ಭಕ್ತರು ಒಗ್ಗೂಡಿ ಶ್ರದ್ಧಾ–ಭಕ್ತಿಯಿಂದ ಇಷ್ಟಲಿಂಗ ಪೂಜೆ ಆಯೋಜಿಸಿರುವುದು ಸಂತೋಷ ತಂದಿದೆ’ ಎಂದರು.
ಗುರುವಾರ ಸಂಜೆ ನಡೆದ ಅಡ್ಡ ಪಲ್ಲಕ್ಕಿ ಮೆರವಣಿಗೆಗೆ ಗ್ರಾಮದ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಉತ್ಸವದ ಅಂಗವಾಗಿ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ವಾದ್ಯ ವೈಭವಗಳೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.
ಈ ವೇಳೆ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಹಲಬುರ್ಗಾ ಹಾವಗಿಲಿಂಗೇಶ್ವರ ಸ್ವಾಮೀಜಿ, ಬರ್ದಿಪುರ ದತ್ತಗಿರಿ ಮಹಾರಾಜ, ಸಾವಿತ್ರಿ ಸಲಗರ, ರೇವಣಸಿದ್ದಯ್ಯ ಹಿರೇಮಠ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿ ದರ್ಶನಾಶೀರ್ವಾದ ಪಡೆದರು. ಆಗಮಿಸಿದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.