ADVERTISEMENT

ಬಿದರ್‌ನಲ್ಲಿ ಕ್ರೀಡಾ ಸಮುಚ್ಛಯ ನಿರ್ಮಾಣ

ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:27 IST
Last Updated 6 ಜನವರಿ 2019, 13:27 IST
ರಹೀಂ ಖಾನ್‌
ರಹೀಂ ಖಾನ್‌   

ಬೀದರ್‌: ‘ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ದಿಸೆಯಲ್ಲಿ ನಗರದಲ್ಲಿ ಬೃಹತ್‌ ಕ್ರೀಡಾ ಸಮುಚ್ಛಯ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು.

‘ಈಜುಕೊಳ, ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್‌ ಒಳಗೊಂಡು ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ ಕನಿಷ್ಠ ₹ 10 ಎಕರೆ ಜಾಗ ಅಗತ್ಯವಿದೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಬೀದರ್‌ ನಗರ ಹಾಗೂ ಹೊರ ವಲಯದಲ್ಲಿ ಜಾಗ ಪರಿಶೀಲಿಸಿ ವರದಿ ಕೊಡುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ನಗರದಲ್ಲಿ ಅನುದಾನ ಕೊರತೆಯಿಂದಾಗಿ ಜಿಲ್ಲಾ ಕ್ರೀಡಾಂಗಣದ ಕಾಮಾಗಾರಿ ಸ್ಥಗಿತಗೊಂಡಿದೆ. ಹೆಚ್ಚುವರಿ ಅನುದಾನ ಒದಗಿಸಿ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಈಗಾಗಲೇ ಎರಡು ಜಿಲ್ಲೆಗಳಿಗೆ ಭೇಟಿಕೊಟ್ಟು ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಶೀಘ್ರದಲ್ಲಿ ಬೀದರ್‌ನಲ್ಲೂ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯಲ್ಲಿರುವ ಕ್ರೀಡಾ ವಸತಿ ಶಾಲೆಗಳ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘54 ವರ್ಷಗಳ ನಂತರ ಬೀದರ್‌ ಕ್ಷೇತ್ರದ ಅಲ್ಪಸಂಖ್ಯಾತ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ದೊರಕಿದೆ. ಅವಕಾಶದ ಪೂರ್ಣ ಸದುಪಯೋಗ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೀದರ್‌ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಿರಂತರ ಕುಡಿಯುವ ನೀರು ಹಾಗೂ ಒಳ ಚರಂಡಿ ಕಾಮಗಾರಿ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಅದನ್ನು ಸಹ ಶೀಘ್ರ ಸರಿಪಡಿಸಲಾಗುವುದು’ ಎಂದು ಹೇಳಿದರು.

‘ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ₹ 37 ಕೋಟಿ ವೆಚ್ಚದಲ್ಲಿ ಜರ್ಮನ್‌ ತಂತ್ರಜ್ಞಾನ ಬಳಿಸಿ ಗೋದಾಮು ನಿರ್ಮಿಸಲಾಗಿದೆ. ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಯ 1 ಲಕ್ಷ ಮೆಟ್ರಿಕ್‌ ಟನ್‌ ಧಾನ್ಯವನ್ನು ಅಲ್ಲಿ ಸಂಗ್ರಹಿಸಿ ಇಡಲಾಗಿದೆ. ನಗರದ ರಸ್ತೆಗಳ ಡಾಂಬರೀಕರಣ ಮಾಡಲಾಗಿದೆ. ಓಲ್ಡ್‌ಸಿಟಿಯಲ್ಲಿ ನಿರ್ಮಿಸಲಾಗಿರುವ 100 ಹಾಸಿಗೆಗಳ ತಾಯಿ ಮಗು ಆಸ್ಪತ್ರೆ ಉದ್ಘಾಟನೆಗೆ ಅಣಿಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.