ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಿ: ಡಾ. ಗಿರೀಶ್ ಬದೋಲೆ

ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಪ್ರತಿನಿಧಿಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:00 IST
Last Updated 3 ಜನವರಿ 2026, 6:00 IST
ಬೀದರ್‌ನಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಪ್ರತಿನಿಧಿಗಳ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಉದ್ಘಾಟಿಸಿದರು
ಬೀದರ್‌ನಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಪ್ರತಿನಿಧಿಗಳ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಉದ್ಘಾಟಿಸಿದರು    

ಬೀದರ್: ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ವತಿಯಿಂದ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಎ.ಆರ್.ಎಂ. ಸಭಾಂಗಣದಲ್ಲಿ ಬೀದರ್, ಔರಾದ್ ಹಾಗೂ ಭಾಲ್ಕಿ ತಾಲ್ಲೂಕುಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಪ್ರತಿನಿಧಿಗಳಿಗೆ ಶುಕ್ರವಾರ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 95ರಷ್ಟು ಫಲಿತಾಂಶ ಹೆಚ್ಚಿಸಲು ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಜಿಲ್ಲೆಗೆ 31ನೇ ಸ್ಥಾನ ದೊರಕಿತ್ತು. ಆಗ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 64 ಆಗಿತ್ತು. ಈ ಬಾರಿ ಫಲಿತಾಂಶ ಹೆಚ್ಚಳದೊಂದಿಗೆ ಸ್ಥಾನ ಏರಿಕೆಗೆ ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

8ನೇ ಹಾಗೂ 9ನೇ ತರಗತಿಯಲ್ಲಿ ಫಲಿತಾಂಶ ವೃದ್ಧಿಸುವ ದಿಸೆಯಲ್ಲಿ ಪ್ರಯತ್ನ ನಡೆಸಿದರೆ,
ಎಸ್‍ಎಸ್‍ಎಲ್‍ಸಿ ಫಲಿತಾಂಶ ಅದಾಗಿಯೇ ಹೆಚ್ಚುತ್ತದೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವುದು, ಹಾಜರಾತಿ ಹೆಚ್ಚಿಸುವುದು ಮೊದಲಾದವುಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸಂಘಟಿತ ಪ್ರಯತ್ನ ಅವಶ್ಯಕವಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸೈಯದ್
ಫುರ್ಕಾನ್ ಪಾಶಾ, ಜಗದೀಶ್ ನಿಂಬೂರ ಉಪನ್ಯಾಸ ನೀಡಿದರು. ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ಸೇಂಟ್ ಜೋಸೆಫ್ ಚರ್ಚ್‍ನ ರೆವರೆಂಡ್ ಫಾದರ್ ವಿಲ್ಸನ್ ಫರ್ನಾಂಡಿಸ್, ಫಾದರ್ ಕ್ಲೇರಿ ಡಿಸೋಜಾ, ಕೌಠಾ (ಬಿ) ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು, ಇಂದೋರ್ ಕೈಫುಲ್ ಇಮಾಮ್ ನಿರ್ದೇಶಕ ಮುಫ್ತಿ ಅಬುಬಕರ್, ಜಾಬೇರ್ ಖಾಸ್ಮಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಎಚ್.ಜಿ, ಡಯಟ್ ನಿರ್ದೇಶಕ ಗುರುಪ್ರಸಾದ್, ಸಮಿತಿಯ ಕಾರ್ಯದರ್ಶಿ ಅಶೋಕ ವಡಗಾವೆ, ಸದಸ್ಯರಾದ ಶಂಭುಲಿಂಗ ವಾಲ್ದೊಡ್ಡಿ, ಮಂಜುಳಾ ಮೂಲಗೆ, ಐ.ಎಂ.ಎ. ಬೀದರ್ ಘಟಕದ ಅಧ್ಯಕ್ಷ ಡಾ. ವಿಜಯ ಬಲ್ಲೂರಕರ್, ಇನ್ನರ್ ವೀಲ್‌ ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ ಇದ್ದರು. ಸಮಿತಿಯ ಬಸವರಾಜ ಮಾಳಗೆ ನಿರೂಪಿಸಿದರು. ಡಾ. ಶ್ವೇತಾ ವಂದಿಸಿದರು.

ಹೋದ ವರ್ಷ ಬೀದರ್‌ ಜಿಲ್ಲೆಯ 70 ಶಾಲೆಗಳು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 20 ರಿಂದ ಶೇ 30 ರಷ್ಟು ಫಲಿತಾಂಶ ಪಡೆದಿದ್ದವು. ಅಂತಹ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.
–ಡಾ. ಗಿರೀಶ್ ಬದೋಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ