ADVERTISEMENT

ಸ್ಥಳೀಯ ಸಂಪನ್ಮೂಲ ಬಳಿಸಿ ಉದ್ಯೋಗ ಆರಂಭಿಸಿ: ಸಂಸದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:28 IST
Last Updated 13 ಸೆಪ್ಟೆಂಬರ್ 2020, 16:28 IST
ಬೀದರ್‌ನ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕಾಮನ್ ಸರ್ವಿಸ್ ಸೆಂಟರ್‌ನಗ್ರಾಮಮಟ್ಟದ ಉದ್ಯಮಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು
ಬೀದರ್‌ನ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕಾಮನ್ ಸರ್ವಿಸ್ ಸೆಂಟರ್‌ನಗ್ರಾಮಮಟ್ಟದ ಉದ್ಯಮಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು   

ಬೀದರ್: ಯುವಕರು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಬೇಕು. ಈ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು.

ನಗರದ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕಾಮನ್ ಸರ್ವಿಸ್ ಸೆಂಟರ್‌ನ ಗ್ರಾಮಮಟ್ಟದ ಉದ್ಯಮಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರಿಗೂ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡುವುದು ಸಾಧ್ಯವಿಲ್ಲ. ಸರ್ಕಾರಿ ಕೆಲಸವೇ ನೌಕರಿ ಅಲ್ಲ. ಸ್ವ ಉದ್ಯೋಗ ಆರಂಭಿಸಿ ಹೆಚ್ಚಿನ ಆದಾಯ ಪಡೆಯಲು ಪ್ರಯತ್ನಿಸಬೇಕು. ಎಸ್‌ಎಸ್‌ಎಲ್‌ಸಿ ಪಾಸಾದ ಯುವಕರು ಸ್ವ ಉದ್ಯೋಗ ಆರಂಭಿಸಿ ಒಬ್ಬ ಸಂಸದರು ಪಡೆಯುವ ಸಂಬಳಕ್ಕಿಂತಲೂ ಹೆಚ್ಚು ಆದಾಯ ಪಡೆಯುತ್ತಿರುವುದು ನಮಗೆಲ್ಲ ಮಾದರಿಯಾಗಿದೆ’ ಎಂದರು

ADVERTISEMENT

‘ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಉದ್ಯಮಿಗಳಿಗೆ ಇನ್ನಷ್ಟು ಮಾರ್ಗದರ್ಶನ ನೋಡಿ ಅವರ ಉದ್ಯಮವನ್ನು ವಿಸ್ತರಿಸುವ ದಿಸೆಯಲ್ಲಿ ನೆರವು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಗ್ರಾಮ ಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರ್ಥಿಕ ಪ್ರಗತಿ ಸಾಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ’ ಎಂದು ಹೇಳಿದರು.

‘2021ರ ಜನವರಿ ಒಳಗೆ 15 ಲಕ್ಷ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಜನತೆಗೆ ವಿತರಿಸುವಂತೆ ಗುರಿ ಹೊಂದಬೇಕು’ ಎಂದು ಸಲಹೆ ಮಾಡಿದರು.

ಸಮಾರಂಭದಲ್ಲಿ ಸಿಎಲ್‌ಇಗಳೊಂದಿಗೆ ಸಂಸದರು ಸಂವಾದ ನಡೆಸಿದರು. ಭಾಲ್ಕಿ ತಾಲ್ಲೂಕಿನ ಸಂಗಮೇಶ ‘ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಆಧಾರ್ ಕಾರ್ಡ್‌ ಅಪಡೇಟ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಕಾರ್ಡ್‌ಗಳನ್ನು ಪಡಿತರ ವಿತರಣಾ ಕೇಂದ್ರಗಳ ಜಂಟಿ ಸಹಯೋಗದೊಂದಿಗೆ ವಿತರಿಸಿದರೆ ಶೇ.100 ಸಾಧನೆ ಸಾಧ್ಯವಾಗುತ್ತದೆ ಎಂದು ಬಸವಕಲ್ಯಾಣದ ಅಂಬಾರಾಯ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಆಹಾರ ಇಲಾಖೆಯ ಉಪ ನಿರ್ದೇಶಕರ ಜತೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಎಸ್‌ಇದಿಂದ ನೋಂದಾಯಿಸಿ ತಹಶೀಲ್ದಾರ್‌ ಕಚೇರಿಗೆ ಕಳುಹಿಸಿದರೆ ಅವರು ತಿರಸ್ಕರಿಸುತ್ತಿದ್ದಾರೆ. ಇದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ರೈತರಿಗೆ ಬೇಕಾಗುವಂತಹ ಪಹಣಿ ಮತ್ತು ಹಿಡುವಳಿ ಪತ್ರಗಳನ್ನು ಸಿಎಸ್‌ಸಿಗಳಿಂದಲೇ ಸಿಗುವಂತೆ ಮಾಡಬೇಕು ಎಂದು ಹುಮಾನಾಬಾದ್ ವೀರೇಶ ಕೋರಿದರು.

ಗ್ರಾಮೀಣ ಮಟ್ಟದಲ್ಲಿ ಸಿಎಸ್‌ಸಿಗಳು ಕೆಲಸ ನಿರ್ವಹಿಸಲು ನೆಟ್‌ವರ್ಕ್ ದೊರೆಯದ ಕಾರಣ ತೊಂದರೆ ಎದುರಿಸುತ್ತಿದ್ಧಾರೆ. ಆದ್ದರಿಂದ ವೈಫೈ ಚೌಪಲ್‌ಗಳನ್ನು ಪ್ರತಿಯೊಂದು ಹಳ್ಳಿಗಳಿಗೆ ನೀಡಬೇಕು ಎಂದು ಔರಾದ್ ತಾಲ್ಲೂಕಿನ ಸುಲೇಮಾನ್ ಮನವಿ ಮಾಡಿದರು. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆರು ಸಿಎಲ್‌ಇಗಳಿಗೆ ಸಂಸದರು ಸನ್ಮಾನಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕಲಬರ್ಗಿ ವಿಭಾಗದ ಸಮಾಲೋಚಕ ಡಾ.ಶಂಕರರಾವ್ ದೇಶಮುಖ, ಜಿಲ್ಲಾ ಸೇವಾ ಸಿಂಧು ಯೋಜನೆಯ ಯೋಜನಾಧಿಕಾರಿ ಸತೀಶ ವಾಲಿ, ಕಾಮನ್ ಸರ್ವೀಸ್ ಸೆಂಟರನ ಜಿಲ್ಲಾ ವ್ಯವಸ್ಥಾಪಕ ಸಚಿನ್ ಉಪ್ಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.