ADVERTISEMENT

ಬೀದರ್ | ಗಾಂಧಿಗಂಜ್‍ನಲ್ಲಿ ಮತ್ತೆ ವ್ಯಾಪಾರ ಶುರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:49 IST
Last Updated 27 ಜುಲೈ 2020, 15:49 IST
ಬೀದರ್‌ನ ಗಾಂಧಿಗಂಜ್‍ನಲ್ಲಿ ಸೋಮವಾರ ಮಹಿಳಾ ಕಾರ್ಮಿಕರು ಧಾನ್ಯಗಳ ಶುದ್ಧೀಕರಣ ಮಾಡಿದರು
ಬೀದರ್‌ನ ಗಾಂಧಿಗಂಜ್‍ನಲ್ಲಿ ಸೋಮವಾರ ಮಹಿಳಾ ಕಾರ್ಮಿಕರು ಧಾನ್ಯಗಳ ಶುದ್ಧೀಕರಣ ಮಾಡಿದರು   

ಬೀದರ್: ಇಲ್ಲಿಯ ಪ್ರಮುಖ ವ್ಯಾಪಾರ ಕೇಂದ್ರ ಗಾಂಧಿಗಂಜ್‍ನಲ್ಲಿ 13 ದಿನಗಳ ನಂತರ ಸೋಮವಾರ ಮತ್ತೆ ವ್ಯಾಪಾರ, ವಹಿವಾಟು ಶುರುವಾಯಿತು.

ವಿವಿಧೆಡೆಯ ರೈತರು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡಿದರು. ಅನೇಕ ಅಂಗಡಿಗಳಲ್ಲಿ ವ್ಯಾಪಾರ ಚಟುವಟಿಕೆಗಳು ಕಂಡು ಬಂದವು.

ಮಾರುಕಟ್ಟೆ ಶುಲ್ಕದಲ್ಲಿನ ತಾರತಮ್ಯ ಖಂಡಿಸಿ ವ್ಯಾಪಾರಿಗಳು ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಜುಲೈ 14 ರಿಂದ ಗಾಂಧಿಗಂಜ್‌ ಬಂದ್ ಮಾಡಿದ್ದರು. 13 ದಿನಗಳ ಕಾಲ ಗಂಜ್‍ನಲ್ಲಿ ಯಾವುದೇ ರೀತಿಯ ವ್ಯಾಪಾರ, ವಹಿವಾಟು ನಡೆದಿರಲಿಲ್ಲ.

ADVERTISEMENT

ಬೇಡಿಕೆಗೆ ಸ್ಪಂದನೆ: ರಾಜ್ಯ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸಿದ ಕಾರಣ ಅನಿರ್ದಿಷ್ಟ ಅವಧಿಯ ವ್ಯಾಪಾರ, ವಹಿವಾಟು ಬಂದ್ ಅನ್ನು ಹಿಂಪಡೆಯಲಾಗಿದೆ ಎಂದು ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆಗೆ ಮಾಡಲಾದ ತಿದ್ದುಪಡಿಯಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಮಾರುಕಟ್ಟೆಯ ಒಳಗೆ ವ್ಯಾಪಾರ ನಡೆಸುವವರಿಗೆ ಮಾತ್ರ ಶುಲ್ಕ ವಿಧಿಸಿ, ಹೊರಗೆ ನಡೆಯುವ ವ್ಯಾಪಾರಕ್ಕೆ ವಿನಾಯಿತಿ ಕಲ್ಪಿಸಿ ತಾರತಮ್ಯ ನೀತಿ ಅನುಸರಿಸಿದ್ದನ್ನು ವಿರೋಧಿಸಿ ಗಾಂಧಿಗಂಜ್‍ನಲ್ಲಿ 13 ದಿನಗಳ ಕಾಲ ವ್ಯಾಪಾರ, ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಮಾರುಕಟ್ಟೆಯಲ್ಲಿನ ವ್ಯಾಪಾರಕ್ಕೆ ಶೇ 1 ರಷ್ಟು ಶುಲ್ಕದಿಂದ ವಿನಾಯಿತಿ ಕಲ್ಪಿಸಬೇಕು. ಏಕರೂಪದ ಶುಲ್ಕ ಹಾಗೂ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಸರ್ಕಾರ ಇದೀಗ ಮಾರುಕಟ್ಟೆ ಶುಲ್ಕವನ್ನು ಶೇ 1 ರಿಂದ ಶೇ 0.35 ಪೈಸೆಗೆ ಇಳಿಸಿರುವುದು ಸಂತಸ ಉಂಟು ಮಾಡಿದೆ. ಇದರಿಂದ ಮಾರುಕಟ್ಟೆಗೆ ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಮಾರಾಟ ಮಾಡುವ ರೈತರಿಗೆ ಉತ್ತಮ ಬೆಲೆ ದೊರಕಲಿದೆ. ಎಪಿಎಂಸಿ ವ್ಯವಸ್ಥೆಯ ಹಿತ ಕಾಪಾಡಿದಂತೆಯೂ ಆಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.