ಬೀದರ್: ‘ನೀಟ್’ ಪರೀಕ್ಷೆಯಿಂದ ರಾಜ್ಯ ಸರ್ಕಾರ ಹೊರಕ್ಕೆ ಬರಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ತಿನಲ್ಲಿ ನಿಲುವಳಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.
ಜುಲೈ 16ರಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ‘ನೀಟ್’ ಕುರಿತು ಚರ್ಚೆ, ಅದರಿಂದ ಹೊರಬರುವ ಕುರಿತು ಸ್ವತಃ ನಾನೇ ನಿಲುವಳಿ ಮಂಡಿಸುತ್ತೇನೆ. ‘ನೀಟ್’ನಿಂದ ಹೊರಗುಳಿಯಲು ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರವು ‘ನೀಟ್’ ದುರುಪಯೋಗ ಪಡಿಸಿಕೊಂಡಿದ್ದು, ಅದರಲ್ಲಿ ದೊಡ್ಡ ಹಗರಣ ನಡೆಸಿದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅನೇಕ ವಿದ್ಯಾರ್ಥಿಗಳು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ನಡೆಸುವ ‘ನೀಟ್’ ಮೇಲೆ ಭರವಸೆ ಉಳಿದಿಲ್ಲ. ವೀರಪ್ಪ ಮೊಯಿಲಿ ಅವರು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ಪರಿಚಯಿಸಿದ್ದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ಆಧರಿಸಿ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ದೊರಕಿಸಿಕೊಡುವುದು ಅದರ ಉದ್ದೇಶವಾಗಿತ್ತು. ಪುನಃ ಆ ರೀತಿಯ ವ್ಯವಸ್ಥೆ ತರಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.