ಬೀದರ್: ‘ರಾಜ್ಯ ಸರ್ಕಾರವು ಕನ್ನಡ ಶಾಲೆಗಳನ್ನು ಸಮಾಧಿಗೊಳಿಸಲು ಹೊರಟಿದ್ದು, ಅದರ ವಿರುದ್ಧ ಜು. 14ರಂದು ರಾಜ್ಯದಾದ್ಯಂತ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ನಿರಂತರವಾಗಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಅನೇಕ ಶಾಲೆಗಳನ್ನು ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬೀದರ್ ಜಿಲ್ಲೆಯೊಂದರಲ್ಲೇ 150 ಕನ್ನಡ ಶಾಲೆಗಳು ಮುಚ್ಚಿವೆ. 100 ಕನ್ನಡ ಶಾಲೆಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಬದಲಾಗಿವೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದರು.
1995ರ ನಂತರ ಪ್ರಾರಂಭಿಸಿರುವ ಅನುದಾನ ರಹಿತ ಖಾಸಗಿ ಶಾಲಾ–ಕಾಲೇಜುಗಳಿಗೆ ಅನುದಾನ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು. ಬಡ ಮಕ್ಕಳ ದಾರಿ ದೀಪವಾದ ಆರ್‌ಟಿಇ ಖಾಸಗಿ ಶಾಲೆಗಳಲ್ಲಿ ಪುನಃ ಆರಂಭಿಸಬೇಕು. ಅನುದಾನಿತ ಶಾಲಾ–ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದಾದ್ಯಂತ ಕೋಚಿಂತ್ ಸೆಂಟರ್‌ಗಳನ್ನು ಬಂದ್ ಮಾಡಬೇಕು. 371(ಜೆ) ಅಡಿ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು. ಕನ್ನಡ ಶಾಲೆಗಳನ್ನು ರಕ್ಷಿಸಿ, ಕನ್ನಡವನ್ನು ಉಳಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಬದಲಿಸುತ್ತಿರುವ ಪ್ರಕ್ರಿಯೆ ನಿಲ್ಲಿಸಬೇಕೆನ್ನುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಕಟ್ಟಡ, ಪೀಠೋಪಕರಣ, ಓದುವಂತಹ ವಾತಾವರಣ ಇಲ್ಲ. ಇದನ್ನು ಸುಧಾರಿಸಲು ಸರ್ಕಾರ ಗಮನಹರಿಸಬೇಕು. ಕನ್ನಡ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆ ಎಂದು ಬದಲಿಸಿದರೆ ಪರಿಸ್ಥಿತಿ ಬದಲಾಗುವುದಿಲ್ಲ. ಶಾಲೆಯ ಮುಖ್ಯಶಿಕ್ಷಕ ಲೆಕ್ಕ ಬರೆಯುವುದರಲ್ಲೇ ತಿಂಗಳು ಕಳೆದು ಹೋಗುತ್ತಿದೆ. ಗುಣಮಟ್ಟದ ಶಿಕ್ಷಣ ಕಲಿಕೆಗೆ ಒತ್ತು ನೀಡಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆ ವಿಷಯ ಇದೆ. ಅದನ್ನು ಸರಿಯಾಗಿ ಕಲಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.
ನಮ್ಮ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕದಲ್ಲಿ ಕನ್ನಡ ಉಳಿಸದಿದ್ದರೆ ಮತ್ತೆಲ್ಲಿ ಉಳಿಸಲು ಸಾಧ್ಯ. ನೆರೆಯ ಮಹಾರಾಷ್ಟ್ರದಲ್ಲಿ ಭಾಷೆಯ ಬೆಳವಣಿಗೆಗೆ ಅಲ್ಲಿನ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರ ಕನಿಷ್ಠ ಅದರ ಬಗ್ಗೆ ಅಧ್ಯಯನ ಮಾಡಿ, ರಾಜ್ಯದಲ್ಲೂ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಾಜೇಂದ್ರ ಮಣಗಿರೇ, ಕೆ. ಗುರುನಾಥ ರೆಡ್ಡಿ, ಮುಹಮ್ಮದ್ ಫರ್ಹಾನ್, ಮಾಣಿಕಪ್ಪ ಗೋರನಾಳೆ, ಸಂದೀಪ್ ಶೆಟಕಾರ, ಸೈಯದ್ ಮುದ್ದೆ, ಶಿವಶಂಕರ ಟೋಕರೆ ಹಾಜರಿದ್ದರು.
ಕನ್ನಡ ಶಾಲೆಗಳನ್ನು ಉಳಿಸಲು ಸಚಿವರು ಶಾಸಕರು ಸಂಸದರು ಇಚ್ಛಾಶಕ್ತಿ ತೋರಿಸುತ್ತಿಲ್ಲ. ಹೀಗಾಗಿಯೇ ಒಂದೊಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ.–ರೇವಣಸಿದ್ದಪ್ಪ ಜಲಾದೆ ಜಿಲ್ಲಾ ಸಂಚಾಲಕ ಕನ್ನಡ ಸಂರಕ್ಷಣಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.