ADVERTISEMENT

ಮೋದಿ, ಶಾ ಪ್ರತಿಕೃತಿ ದಹನ

ಡಿ.ಕೆ. ಶಿವಕುಮಾರ ಬಂಧನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 14:07 IST
Last Updated 4 ಸೆಪ್ಟೆಂಬರ್ 2019, 14:07 IST
ಶಾಸಕ ಡಿ.ಕೆ.ಶಿವಕುಮಾರ ಅವರ ಬಂಧನವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು
ಶಾಸಕ ಡಿ.ಕೆ.ಶಿವಕುಮಾರ ಅವರ ಬಂಧನವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು   

ಬೀದರ್: ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ ಬಂಧನವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹನಗೊಳಿಸಿದರು.

ಇ.ಡಿ. ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿಲ್ಲ ಎನ್ನುವ ಕಾರಣ ಒಡ್ಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು ಹೇಳಿದರು.

ADVERTISEMENT

ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿರುವ ಡಿ.ಕೆ. ಶಿವಕುಮಾರ ಅವರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿ ಕಾರ್ಯ ಮಾಡುವುದನ್ನು ಬಿಟ್ಟು ಪ್ರತಿ ಪಕ್ಷಗಳ ನಾಯಕರನ್ನು ಹಣೆಯುವುದರಲ್ಲಿ ನಿರತವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ. ಸಿಬಿಐ, ಐಟಿ, ಇಡಿಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಬಿಡಿಎ ಮಾಜಿ ಅಧ್ಯಕ್ಷ ಸಂಜಯ ಜಾಗೀರದಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶರಣಪ್ಪ ಬಲ್ಲೂರ, ವೆಂಕಟರಾವ್ ಶಿಂಧೆ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಕಾರ್ಯದರ್ಶಿ ಪರ್ವೇಜ್ ಕಮಲ್, ಮುಖಂಡರಾದ ರೋಹಿದಾಸ ಘೋಡೆ, ಅಜಮತ್ ಪಟೇಲ್, ಇರ್ಷಾದ್ ಅಲಿ ಪೈಲ್ವಾನ್, ಸಂಜುಕುಮಾರ ಡಿ.ಕೆ, ಗೋವರ್ಧನ್ ರಾಠೋಡ್, ಚಂದ್ರಶೇಖರ ಚನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ, ಫರೀದ್ ಖಾನ್, ಅಜರ್ ರೆಹಾನ್ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.