ADVERTISEMENT

ರಸೂಲಾಬಾದ್ ಬೀದಿ ದೀಪ ಬಿಲ್ ಸೊನ್ನೆ!

​ಪ್ರಜಾವಾಣಿ ವಾರ್ತೆ
Published 11 ಮೇ 2025, 4:47 IST
Last Updated 11 ಮೇ 2025, 4:47 IST
ಬೀದರ್ ತಾಲ್ಲೂಕಿನ ರಸೂಲಾಬಾದ್ ಗ್ರಾಮದಲ್ಲಿ ಬೆಳಗುತ್ತಿರುವ ಸೋಲಾರ್ ಬೀದಿ ದೀಪಗಳು
ಬೀದರ್ ತಾಲ್ಲೂಕಿನ ರಸೂಲಾಬಾದ್ ಗ್ರಾಮದಲ್ಲಿ ಬೆಳಗುತ್ತಿರುವ ಸೋಲಾರ್ ಬೀದಿ ದೀಪಗಳು   

ರಸೂಲಾಬಾದ್(ಜನವಾಡ): ಬೀದರ್ ತಾಲ್ಲೂಕಿನ ಪುಟ್ಟ ಗ್ರಾಮ ರಸೂಲಾಬಾದ್‍ನ ಬೀದಿ ದೀಪಗಳ ಬಿಲ್ ಸೊನ್ನೆಯಾಗಿದೆ. ಪಂಚಾಯಿತಿ ಮೇಲಿದ್ದ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಹೊರೆ ಇಳಿದಿದೆ. ಗ್ರಾಮದಲ್ಲಿ ಆಗಾಗ ಆಗುತ್ತಿದ್ದ ವಿದ್ಯುತ್ ಕಡಿತದ ಸಮಸ್ಯೆಗೂ ಮುಕ್ತಿ ದೊರೆತಿದೆ.

ಗ್ರಾಮದಲ್ಲಿ ಅಮೃತ ಯೋಜನೆಯಡಿ ಅಳವಡಿಸಿದ ಬೀದಿ ದೀಪಗಳು ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿವೆ. ಮಾಳೆಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ 50 ಮನೆಗಳಿವೆ. ಜನಸಂಖ್ಯೆ 250 ಇದೆ. ಹಿಂದೆ ಗ್ರಾಮದಲ್ಲಿ ಉರಿಯುತ್ತಿದ್ದ ಬೀದಿ ದೀಪಗಳಿಗೆ ಗ್ರಾಮ ಪಂಚಾಯಿತಿ ಜೆಸ್ಕಾಂಗೆ ಮಾಸಿಕ ₹20 ಸಾವಿರ ಬಿಲ್ ಪಾವತಿಸುತ್ತಿತ್ತು. ಸೋಲಾರ್ ದೀಪಗಳಿಂದ ವಿದ್ಯುತ್ ಬಿಲ್ ಭರಿಸುವ ತಾಪತ್ರಯ ತಪ್ಪಿದೆ.

ಅಮೃತ ಯೋಜನೆಯಡಿ ಗ್ರಾಮದಲ್ಲಿ ಹೊಸ ಕಂಬಗಳೊಂದಿಗೆ ಒಟ್ಟು 24 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ದೀಪಗಳು ರಾತ್ರಿ ಹೊತ್ತು ಉರಿಯುತ್ತವೆ. ಬೆಳಗಾಗುತ್ತಲೇ ತಾನಾಗಿಯೇ ಬಂದ್ ಆಗುತ್ತವೆ. ರಾತ್ರಿ ಗಾಳಿ, ಮಳೆ ಸುರಿದರೂ ನಿರಂತರ ಬೆಳಗುತ್ತವೆ.

ADVERTISEMENT

‘ಗ್ರಾಮ ಪಂಚಾಯಿತಿಗೆ ಅಮೃತ ಯೋಜನೆಯಡಿ ಸೋಲಾರ್ ದೀಪಗಳ ಅಳವಡಿಕೆಗೆ ₹4 ಲಕ್ಷ ಅನುದಾನ ಬಂದಿತ್ತು. ಅದರಲ್ಲಿ ಎರಡು ವರ್ಷಗಳ ಹಿಂದೆ ರಸೂಲಾಬಾದ್‍ನಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸುತ್ತಾರೆ ಮಾಳೆಗಾಂವ್ ಪಿಡಿಒ ಅನಿಲಕುಮಾರ ಚಿಟ್ಟಾ.

‘ಗ್ರಾಮದ ಬೀದಿಗಳಲ್ಲಿ ಸೋಲಾರ್ ದೀಪ ಅಳವಡಿಸಿದ ನಂತರ ಜೆಸ್ಕಾಂನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ರೂ. 20 ಸಾವಿರದಂತೆ ಎರಡು ವರ್ಷಗಳಲ್ಲಿ ಪಂಚಾಯಿತಿಗೆ ರೂ. 4.80 ಲಕ್ಷ ವಿದ್ಯುತ್ ಬಿಲ್ ಉಳಿತಾಯವಾಗಿದೆ’ ಎಂದು ಹೇಳುತ್ತಾರೆ.

‘ಜೆಸ್ಕಾಂ ದೀಪಗಳು ಮಳೆ, ಗಾಳಿಗೆ ಹಾಳಾದರೆ ಬದಲಿಸಬೇಕಾಗುತ್ತಿತ್ತು. ಅದಕ್ಕೆ ಸಮಯ ಹಿಡಿಯುತ್ತಿತ್ತು. ವರ್ಷದಲ್ಲಿ ಎರಡು ಬಾರಿ ನಿರ್ವಹಣೆ ಮಾಡಬೇಕಾಗಿತ್ತು. ಸೋಲಾರ್ ದೀಪಗಳಿಗೆ ಆ ಸಮಸ್ಯೆ ಇಲ್ಲ’ ಎಂದು ತಿಳಿಸುತ್ತಾರೆ.

‘ಸೋಲಾರ್ ದೀಪಗಳು ಆಟೊಮೆಟಿಕ್ ಆಗಿ ಆನ್ ಮತ್ತು ಆಫ್ ಆಗುತ್ತವೆ. ನಿತ್ಯ ಸಂಜೆ 6.45ಕ್ಕೆ ಬೆಳಗಲು ಆರಂಭಿಸುತ್ತವೆ. ಬೆಳಿಗ್ಗೆ 6ಕ್ಕೆ ಬಂದ್ ಆಗುತ್ತವೆ. ಗುತ್ತಿಗೆದಾರರ ಐದು ವರ್ಷಗಳ ನಿರ್ವಹಣೆ ಅವಧಿ ಇದೆ. ಈವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಹೇಳುತ್ತಾರೆ.

‘ಸೋಲಾರ್ ದೀಪಗಳಿಂದ ಉಳಿತಾಯ ಆಗುವ ವಿದ್ಯುತ್ ಬಿಲ್ ಹಣದಿಂದ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ’ ಎಂದು ತಿಳಿಸುತ್ತಾರೆ.

‘ಅಮೃತ ಯೋಜನೆ ಅನುದಾನ ಗ್ರಾಮದಲ್ಲಿ ಸದ್ಬಳಕೆಯಾಗಿದೆ. ಸೋಲಾರ್ ಬೀದಿ ದೀಪಗಳಿಂದ ಗ್ರಾಮದಲ್ಲಿ ರಾತ್ರಿ ಸತತ ಬೆಳಕಿರುತ್ತದೆ. ಬಿರುಗಾಳಿ, ಮಳೆಯಲ್ಲೂ ಬೀದಿ ದೀಪಗಳು ಉರಿಯುತ್ತವೆ. ಅವಘಡಗಳ ಭಯವಿಲ್ಲ’ ಎಂದು ಹೇಳುತ್ತಾರೆ. ಗ್ರಾಮದ ಪ್ರಭು ಟೇಕಮಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.