
ಬೀದರ್: ನಗರದ ಗುದಗೆ ಸೂಪರ್ ಸ್ಪೆಷಾಲಿಟಿ ಹಾಗೂ ಮಲ್ಟಿ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಪಾರ್ಶ್ವವಾಯು ದಿನ ಆಚರಿಸಲಾಯಿತು.
ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಡೆದ ಉಚಿತ ಮೆಗಾ ಕ್ಯಾಂಪ್‌ನಲ್ಲಿ ಪಾರ್ಶ್ವವಾಯು ರೋಗಿಗಳ ಉಚಿತ ತಪಾಸಣೆ ಮಾಡಿ, ಪರೀಕ್ಷಿಸಲಾಯಿತು. ರಿಯಾಯಿತಿ ದರದಲ್ಲಿ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು. ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಭಾಗದ ಜನರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಹೆಸರಾಂತ ನರರೋಗ ತಜ್ಞ ಡಾ. ಪ್ರಶಾಂತ ಅಳ್ಳೆ ಸಸಿಗೆ ನೀರೆರೆದು ಉದ್ಘಾಟಿಸಿ, ಪಾರ್ಶ್ವವಾಯುಗೆ ತುತ್ತಾದ ರೋಗಿಯು 4 ಗಂಟೆ ಒಳಗೆ ನುರಿತ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖವಾಗುವ ಪ್ರಮಾಣ ಹೆಚ್ಚಿರುತ್ತದೆ ಎಂದರು.
ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 1.8 ಕೋಟಿ ಜನರಿಗೆ ಪಾರ್ಶ್ವವಾಯು (ಸ್ಟ್ರೋಕ್) ಆಗುತ್ತಿದೆ. ಇದರ ಪರಿಣಾಮವಾಗಿ 50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ‘ಸ್ಟ್ರೋಕ್ ಇಸ್ ಎ ಮೆಡಿಕಲ್ ಎಮರ್ಜೆನ್ಸಿ’ ಎಂಬ ಘೋಷವಾಕ್ಯದಡಿ ವಿಶ್ವ ಪಾರ್ಶ್ವವಾಯು ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಹೆಚ್ಚಿನ ರಕ್ತದೊತ್ತಡ, ಮಧುಮೇಹ, ಧೂಮಪಾನ ಮತ್ತು ಅತಿ ತೂಕ ಪಾರ್ಶ್ವವಾಯುಗೆ ಪ್ರಮುಖ ಕಾರಣ. ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳಿಂದ ಸ್ಟ್ರೋಕ್ ತಡೆಯಬಹುದು ಎಂದರು.
ಗುದಗೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಕಾಂತ ಗುದಗೆ ಅಧ್ಯಕ್ಷತೆ ವಹಿಸಿ, ರಕ್ತನಾಳದಲ್ಲಿ ತಂಬೋಸಿಸ್ ಅಥವಾ ನರಗಳ ದೌರ್ಬಲ್ಯದಿಂದ ಪಾರ್ಶ್ವವಾಯು ಬರುತ್ತದೆ. ಇದರಿಂದ ರಕ್ತಚಲನೆ ಪ್ರಮಾಣ ಕಡಿಮೆ ಆಗಿ ಆಮ್ಲಜನಕ ಸೇರಿದಂತೆ ಇತರೆ ಪೋಷಕಾಂಶಗಳ ಸಾಗಾಟ ಕಡಿಮೆಯಾಗಿ ಪಾರ್ಶ್ವವಾಯು ಉಂಟಾಗುತ್ತದೆ. ಒಂದು ನಿಮಿಷಕ್ಕೆ 10 ಲಕ್ಷ 90 ಸಾವಿರ ನರಗಳು ಸತ್ತು ಹೋಗುತ್ತವೆ. ಇದಕ್ಕೆ ‘ಗೋಲ್ಡನ್ ಪಿರಿಯಡ್’ ಎಂದು ಕರೆಯಲಾಗುತ್ತದೆ. ನಾಲ್ಕು ಗಂಟೆ ಒಳಗಡೆ ನುರಿತ ವೈದ್ಯರಿಂದ ಪರಿಣಾಮಕಾರಿ ಚಿಕಿತ್ಸೆ ಪಡೆದರೆ ರೋಗ ಪ್ರಮಾಣ ತಗ್ಗಿಸಲು ಸಹಾಯಕವಾಗುತ್ತದೆ ಎಂದರು.
ಡಾ. ಸಚಿನ್ ಗುದಗೆ, ಡಾ. ನಿತಿನ್ ಗುದಗೆ, ಡಾ.ಮಹೇಶ ತೊಂಡಾರೆ, ಡಾ. ನಾಗಭೂಷಣ್, ಡಾ. ಲಕ್ಷ್ಮೀ ಹರೀಶ, ಡಾ. ಶಾರದಾ ಗುದಗೆ, ಡಾ. ವಿಜಯಲಕ್ಷ್ಮಿ ಗುದಗೆ, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ಸಕ್ಕರೆ ಹಾಗೂ ಉಪ್ಪಿನ ಬಳಕೆ ತಗ್ಗಿಸಿ ಮಿತ ಆಹಾರ ಸೇವಿಸಬೇಕು. ನಿತ್ಯ ವ್ಯಾಯಾಮ ವಾಯುವಿಹಾರ ಯೋಗ ಹಾಗೂ ಧ್ಯಾನ ಮಾಡಬೇಕು. ಸರಿಯಾದ ನಿದ್ರೆ ಹೆಚ್ಚು ನೀರು ಸೇವಿಸಿದರೆ ಆರೋಗ್ಯವಾಗಿ ಇರಬಹುದು.ಡಾ. ಚಂದ್ರಕಾಂತ ಗುದಗೆ ವ್ಯವಸ್ಥಾಪಕ ನಿರ್ದೇಶಕ ಗುದಗೆ ಆಸ್ಪತ್ರೆ
ಸ್ಟ್ರೋಕ್ ಮೊದಲ ಲಕ್ಷಣಗಳನ್ನು ಗುರುತಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ದೇಹದ ಒಂದು ಭಾಗ ದುರ್ಬಲವಾಗುವುದು ಮಾತಿನಲ್ಲಿ ಅಸ್ಪಷ್ಟತೆ ಅಥವಾ ಮುಖದ ಬದಿ ವಕ್ರ ಕಾಣಿಸಿದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.ಡಾ. ಪ್ರಶಾಂತ ಅಳ್ಳೆ ನರರೋಗ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.