ADVERTISEMENT

‘ಸತ್ಯ ಶುದ್ಧ ಕಾಯಕದಿಂದ ಜೀವನದಲ್ಲಿ ಯಶ’

ಸಾಧಕಿ ನಾಗವೇಣಿ ಶಂಕರ ಮರಕಲ್‌ಕರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 15:34 IST
Last Updated 4 ಜನವರಿ 2023, 15:34 IST
ಬೀದರ್‌ನ ಝೀರಾ ಕನ್ವೆನ್ಯನ್ ಹಾಲ್‌ನಲ್ಲಿ ಬೀದರ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಉತ್ಸವಕ್ಕೆ ಸಾಧಕಿ ನಾಗವೇಣಿ ಶಂಕರ ಮರಕಲ್‌ಕರ್‌ ಹಾಗೂ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ಶುಶ್ರೂಷಾ ಅಧಿಕಾರಿ ಲಕ್ಷ್ಮಿ ಮೇತ್ರೆ ಜಂಟಿಯಾಗಿ ಚಾಲನೆ ನೀಡಿದರು
ಬೀದರ್‌ನ ಝೀರಾ ಕನ್ವೆನ್ಯನ್ ಹಾಲ್‌ನಲ್ಲಿ ಬೀದರ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಉತ್ಸವಕ್ಕೆ ಸಾಧಕಿ ನಾಗವೇಣಿ ಶಂಕರ ಮರಕಲ್‌ಕರ್‌ ಹಾಗೂ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ಶುಶ್ರೂಷಾ ಅಧಿಕಾರಿ ಲಕ್ಷ್ಮಿ ಮೇತ್ರೆ ಜಂಟಿಯಾಗಿ ಚಾಲನೆ ನೀಡಿದರು   

ಬೀದರ್‌: ‘ಸತ್ಯ ಶುದ್ಧ ಕಾಯಕದಿಂದ ಜೀವನದಲ್ಲಿ ಯಶ ಸಾಧಿಸಬಹುದು. ಅಂತಹ ಯಶ ಸಮಾಜದಲ್ಲಿ ಗೌರವದ ಸ್ಥಾನ ತಂದು ಕೊಡುತ್ತದೆ’ ಎಂದು ಬೀದರ್‌ ತಾಲ್ಲೂಕಿನ ಕೊಳಾರ(ಕೆ) ಗ್ರಾಮದ ಬಸವ ಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಪ್ರೌಢ ಶಾಲೆಯ ಪೋಷಕಿ, ಸಾಧಕಿ ನಾಗವೇಣಿ ಶಂಕರ ಮರಕಲ್‌ಕರ್‌ ಹೇಳಿದರು.

ನಗರದ ಝೀರಾ ಕನ್ವೆನ್ಯನ್ ಹಾಲ್‌ನಲ್ಲಿ ಬೀದರ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇವರು ಎಲ್ಲರಿಗೂ ಒಂದೊಂದು ಸಾಮರ್ಥ್ಯ ಕೊಟ್ಟಿದ್ದಾನೆ. ಅಂತಹ ಸಾಮರ್ಥ್ಯವನ್ನು ಓರೆಗೆ ಹಚ್ಚಿ ಸಾಧಿಸಿ ತೋರಿಸುವ ಛಲಗಾರಿಕೆ ನಮ್ಮದಾಗಬೇಕು’ ಎಂದರು.

ADVERTISEMENT

‘ಆರ್ಥಿಕ ಸಂಕಷ್ಟದಲ್ಲಿ ಇದ್ದ ಕಾರಣ ಹೋಟೆಲ್‌ನಲ್ಲಿ ರೊಟ್ಟಿ ಮಾಡಲು ಶುರು ಮಾಡಿದೆ. ನಾನು ಒಂದು ರೊಟ್ಟಿ ಬೇಯಿಸುವುದರೊಳಗೆ ಇನ್ನೊಬ್ಬ ಮಹಿಳೆ ಎರಡು ರೊಟ್ಟಿ ಮಾಡುತ್ತಿದ್ದಳು. ನಾನು ಅವಳನ್ನು ಅನುಸರಿಸಿ ಇನ್ನಷ್ಟು ಮುಂದಕ್ಕೆ ಹೋದೆ. ಹಿಂದೆ 500 ರೊಟ್ಟಿ ಮಾಡುತ್ತಿದ್ದ ನಾನು ಇಂದು ಒಂದು ಸಾವಿರ ರೊಟ್ಟಿ ತಟ್ಟುತ್ತಿದ್ದೇನೆ. ಇದುವೇ ನನ್ನನ್ನು ಸಾಧನೆಯ ಶಿಖರಕ್ಕೆ ತಲುಪಿಸಿದೆ’ ಎಂದು ಹೇಳಿದರು.

‘ಇಂದು ರೊಟ್ಟಿ ಮಾಡುವ ಮೂಲಕವೇ ನಾನು ಹಳ್ಳಿಗಳಲ್ಲಿ ಎರಡು ಶಾಲೆಗಳನ್ನು ನಡೆಸುತ್ತಿದ್ದೇನೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ತಿಳಿಸಿದರು.

ಹುಮನಾಬಾದ್‌ ತಾಲ್ಲೂಕಿನ ಘಾಟಬೋರಾಳದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ಶುಶ್ರೂಷಾ ಅಧಿಕಾರಿ ಲಕ್ಷ್ಮಿ ಮೇತ್ರೆ ಮಾತನಾಡಿ, ‘ ‘ಬಡತನ, ಹಸಿವು ಹಾಗೂ ಅವಮಾನ ಬದುಕಿನ ಪಾಠ ಕಲಿಸುತ್ತವೆ’ ಎಂದರು.

‘ನಾನು ಬೆಳೆದದ್ದು ಬಡತನದಲ್ಲಿ. ತಂದೆ–ತಾಯಿ ಕಷ್ಟಪಟ್ಟು ಓದಿಸಿದ ನಂತರ ಕಿರಿಯ ಆರೋಗ್ಯ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡೆ. ನನಗೆ ಒಂದು ಮಗು ಇದೆ. ಮದುವೆಯಾದ ಮೂರು ವರ್ಷದಲ್ಲಿ ಪತಿ ಕೊನೆಯುಸಿರೆಳೆದರು. ಈವರೆಗೆ ಅನೇಕ ಮಹಿಳೆಯರ ಹೆರಿಗೆ ಮಾಡಿಸಿದೆ. ಕೋವಿಡ್‌ನಲ್ಲೂ ಗಟ್ಟಿಯಾಗಿ ನಿಂತು ರೋಗಿಗಳ ಸೇವೆ ಮಾಡಿದೆ. ಅದರ ಪ್ರತಿಫಲವಾಗಿಯೇ ನನಗೆ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ದೊರಕಿದೆ’ ಎಂದು ಹೇಳಿದರು.

ರಾಣಿ ಸತ್ಯಮೂರ್ತಿ ಭರತ ನಾಟ್ಯ ಪ್ರದರ್ಶಿಸಿದರು. ವಿದ್ಯಾವತಿ ಬಲ್ಲೂರ, ರಾಜಮ್ಮ, ಕಸ್ತೂರಿ ಪಟಪಳ್ಳಿ, ಶ್ರೀದೇವಿ ಪಾಟೀಲ ತಂಡದವರು ‘ಕಲ್ಯಾಣ ಕ್ರಾಂತಿ’ ಕಿರು ನಾಟಕ ಪ್ರದರ್ಶಿಸಿದರು. ನಂತರ ವಿವಿಧ ಕಲಾವಿದರಿಂದ ಸಾಂಪ್ರದಾಯಿಕ ನೃತ್ಯ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಂ ಎಂ., ಕೀರ್ತಿ ಚಾಲಕ್, ಸಾವಿತ್ರಿ ಸಲಗರ, ಗುರಮ್ಮ ಸಿದ್ದಾರೆಡ್ಡಿ, ಶಂಕುತಲಾ ಬೆಲ್ದಾಳೆ, ಗೀತಾ ಚಿದ್ರಿ, ಪೂರ್ಣಿಮಾ ಜಾರ್ಜ್, ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ರೇಖಾ ಸೌದಿ, ಮಂಗಲಾ ಭಾಗವತ್, ಸುಜಾತಾ ಹೊಸಮನಿ, ಪ್ರತಿಮಾ ಗೋವಿಂದ ರೆಡ್ಡಿ, ಸಂಧ್ಯಾ ಕಿಶೋರ ಬಾಬು, ಪೂರ್ಣಿಮಾ ಮಹೇಶ ಮೇಘಣ್ಣವರ್, ಗೀತಾ ಶಿವಕುಮಾರ ಶೀಲವಂತ, ಜಿಲ್ಲಾ ಕೈಗಾರಿಕೆ ಕೇಂದ್ರದ ಸುರೇಖಾ ಮುನ್ನೋಳಿ, ಬಿಸಿಯೂಟ ಅಧಿಕಾರಿ ಗೀತಾ ಗಡ್ಡಿ ಇದ್ದರು.

ಭಾನುಪ್ರಿಯಾ ಹಾಗೂ ತಂಡದವರು ನಾಡಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.