ADVERTISEMENT

ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 8:30 IST
Last Updated 4 ಡಿಸೆಂಬರ್ 2025, 8:30 IST
   

ಬೀದರ್‌: ‘ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಡಿ. 7ರಂದು ಸಂಜೆ 6ಕ್ಕೆ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ತಿಳಿಸಿದರು.

ಕೋಮು ಸೌಹಾರ್ದ, ಕೋಮು ಸಾಮರಸ್ಯ, ಶಾಂತಿ, ನೆಮ್ಮದಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಮೊದಲ ಕಾರ್ಯಕ್ರಮ, ಕೊಪ್ಪಳದಲ್ಲಿ ಎರಡನೇ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಸ್ಪಂದನೆ ದೊರೆತಿದೆ. ಎಲ್ಲಾ ವರ್ಗಗಳ ಜನ ಅದರಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಕೂಡ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ ಇದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇಡೀ ಜಗತ್ತಿಗೆ ಪ್ರಜಾಪ್ರಭುತ್ವ, ಸಂಸತ್ತಿನ ಪರಿಕಲ್ಪನೆ ಕೊಟ್ಟ ನಾಡು ಬಸವಕಲ್ಯಾಣ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರು ಮೆಟ್ಟಿದ ಪವಿತ್ರ ಸ್ಥಳ ಕಲ್ಯಾಣ. ಇಲ್ಲಿ ಕಾರ್ಯಕ್ರಮ ಸಂಘಟಿಸಿ ಇಡೀ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ಕೊಡಲಾಗುವುದು ಎಂದರು.

ADVERTISEMENT

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಹವಾ ಮಲ್ಲಿನಾಥ ಸ್ವಾಮೀಜಿ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ವಕ್ಫ್‌ ಬೋರ್ಡ್‌ ನೂತನ ಅಧ್ಯಕ್ಷ ಸೈಯದ್‌ ಮುಹಮ್ಮದ್‌ ಅಲಿ ಅಲ್ ಹುಸೇನಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮನ್ನಾನ್‌ ಸೇಠ್‌, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಬಸವಕಲ್ಯಾಣ ದರ್ಗಾದ ಸೈಯದ್‌ ಅಲಿ ಹಾಜರಿದ್ದರು.

ಕಲ್ಯಾಣದಲ್ಲಿ ಮೊದಲ ಸಮಾವೇಶ
ವಿಧಾನ ಪರಿಷತ್‌ ಮಾಜಿ ಸದಸ್ಯರೂ ಆದ ಕಾಂಗ್ರೆಸ್‌ ಮುಖಂಡ ವಿಜಯ್‌ ಸಿಂಗ್‌ ಮಾತನಾಡಿ, ಮೊದಲ ಬಾರಿಗೆ ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಡೀ ಕರ್ನಾಟಕಕ್ಕೆ ಶಾಂತಿ, ಸೌಹಾರ್ದದ ಬಗ್ಗೆ ಉತ್ತಮ ಸಂದೇಶ ಹೋಗಲೆಂದು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ವರ್ಗದವರನ್ನು ಇದಕ್ಕೆ ಆಹ್ವಾನಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.