
ಬೀದರ್: ‘ಕಳೆದ ಡಿ.7ರಂದು ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಬಿಜೆಪಿ ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ್ ಆರೋಪಿಸಿದ್ದಾರೆ.
ಈ ಕುರಿತು ಗುರುವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಸಮಾನತೆಯ ಸಂದೇಶ ಸಾರಿದ ಬಸವ ನಾಡಿನಿಂದ ಜಾತಿ, ಧರ್ಮದ ನಡುವೆ ದ್ವೇಷ, ಮನಸ್ತಾಪ, ವೈಮನಸ್ಸು ಹುಟ್ಟಿಸಿದೆ. ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ತರುವ ಕೆಲಸ ಮಾಡಲಾಗಿದೆ. ಈ ಸಮಾವೇಶದ ಸಮಗ್ರ ಅಂಶ, ಪ್ರಮುಖರು ಮಾಡಿದ ಭಾಷಣ ಗಮನಿಸಿದರೆ ಸೂಫಿ-ಸಂತರ ಹೆಸರಿನ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸಮಾವೇಶ ನಡೆಸಿ ಸಮಾಜಕ್ಕೆ ದಿಕ್ಕು ತಪ್ಪಿಸುವ, ಸಮಾಜಕ್ಕೆ ದ್ರೋಹ ಬಗೆಯುವ ಕೆಲಸ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಬಸವಕಲ್ಯಾಣ ಮಹಾತ್ಮ ಬಸವಣ್ಣನವರ ಪುಣ್ಯಭೂಮಿ. 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿಯ, ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಧರ್ಮ ಸಮನ್ವಯದ ನೆಲೆಬೀಡಾಗಿದೆ. ಜಾತ್ಯತೀತ ನೆಲೆಯಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಹೊಸ ಮುನ್ನುಡಿ ಬರೆದ ಪಾವನ ಶರಣಭೂಮಿ ಇದಾಗಿದೆ. ಇಂತಹ ಪವಿತ್ರ ಭೂಮಿಯಲ್ಲಿ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ಈ ವೇದಿಕೆಯಿಂದ ಜಾತಿ, ಧರ್ಮ, ಪಕ್ಷದ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವ, ಕೋಮು ಸಾಮರಸ್ಯಕ್ಕೆ ಕುತ್ತು ತರುವ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದ್ವೇಷ ಭಾಷಣ ಮಾಡಿದವರ ವಿರುದ್ಧ ಪೊಲೀಸರು ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಸಮಾವೇಶದಲ್ಲಿ ಪಾಲ್ಗೊಂಡ ಉತ್ತರಪ್ರದೇಶ ಸಂಸದ ಇಮ್ರಾನ್ ಮಸೂದ್ ಬಿಜೆಪಿ ವಿರುದ್ಧ ಟೀಕೆ ಮಾಡಲು ಈ ವೇದಿಕೆ ಬಳಸಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಯೋಗಿ ಅವರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಗಂಭೀರವಿದೆ. ನಾವು ಯಾರೂ ಅಲ್ಲಿ ಸುರಕ್ಷಿತವಿಲ್ಲ ಎಂದು ಹೇಳುವ ಮೂಲಕ ಸಾಮಾಜಿಕ ಸಾಮರಸ್ಯ ಕದಲುವ ಕೆಲಸ ಮಾಡಿದ್ದಾರೆ. ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೋಳ್ಸೆ ಪಾಟೀಲ್ ಭಾಷಣ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಆರೆಸ್ಸೆಸ್, ಬಿಜೆಪಿ ವಿರುದ್ಧ ಹಾಗೂ ಬ್ರಾಹ್ಮಣ ಸಮಾಜದ ಬಗ್ಗೆ ಅಸಂಬದ್ಧ, ಅಸಾಂವಿಧಾನಿಕ ಪದಗಳನ್ನು ಬಳಸಿ ಈ ಸಮಾವೇಶ ಕಾಂಗ್ರೆಸ್ ರಾಜಕೀಯ ಹಿನ್ನೆಲೆಯ ಸಮಾವೇಶ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆದಿರುವ ಎಲ್ಲ ದಂಗೆಗಳಿಗೆ ಆರೆಸ್ಸೆಸ್ ಕಾರಣವಿದೆ, ಸಂವಿಧಾನ ಖತಂ ಮಾಡಲು ಬಿಜೆಪಿ ಅಧಿಕಾರಕ್ಕೇರಿದೆ, ಹಿಂದು ಧರ್ಮವೇ ಅಲ್ಲ, ಹಿಂದು ಎಂಬುದು ಒಂದು ಬೈಗುಳ ಪದ ಎಂದು ತಲೆಬುಡವಿಲ್ಲದ ಅರ್ಥಹೀನ ಹೇಳಿಕೆ ನೀಡಿದ್ದಾರೆ. ಜಾತಿ, ಧರ್ಮ ಬಗ್ಗೆ ನಾಲಿಗೆ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಮಾವೇಶದ ಆಯೋಜಕರಲ್ಲಿ ಪ್ರಮುಖರಾದ ಎಂಎಲ್‌ಸಿ ಸಲೀಂ ಅಹ್ಮದ್, ಮಾಜಿ ಎಂಎಲ್ಸಿ ವಿಜಯಸಿಂಗ್ ಅವರು ಬಿಜೆಪಿ, ಕೇಂದ್ರದ ಸಚಿವರ ಬಗ್ಗೆ ಟೀಕೆ ಮಾಡಿದ್ದಾರೆ. ಎಐಸಿಸಿ ಕಾರ್ಯದರ್ಶಿ ಗೋಪಿನಾಥನ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಈಶ್ವರ ಖಂಡ್ರೆ, ಮಹ್ಮದ್ ಅಜರುದ್ದೀನ್ ಇತರರು ಒಂದೆಡೆ ಬಿಜೆಪಿಗೆ ಟೀಕಿಸಿ, ಇನ್ನೊಂದೆಡೆ ರಾಹುಲ್ ಗಾಂಧಿ ಕೈಬಲಪಡಿಸಬೇಕೆಂದು ಕೋರಿದ್ದಾರೆ. ಇದು ಸೂಫಿ-ಸಂತರ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂಬುದು ಜನತೆಗೆ ಗೊತ್ತಾಗಿದೆ ಎಂದಿದ್ದಾರೆ.
ಜಾತಿ ವಿಷಬೀಜ ಬಿತ್ತಿ ಭಾಷಣ ಮಾಡಿದ ಎಲ್ಲರ ವಿರುದ್ಧ ಖಟ್ಲೆ ಹೂಡಿ, ದ್ವೇಷ ಭಾಷಣ ಕಾಯ್ದೆ ಜಾರಿ ಬಗ್ಗೆ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಲಿ.-ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕರು ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ
ಸೂಫಿ-ಸಂತರ ಹೆಸರಿನಲ್ಲಿ ಕಾಂಗ್ರೆಸ್ ಪ್ರಚಾರದಂಥ ಸಮಾವೇಶ ನಡೆಸಿ, ಸಮಾಜಕ್ಕೆ ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಖಂಡನೀಯ.-ಸೋಮನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ
ಮಾಜಿ ಎಂಎಲ್ಸಿ ವಿಜಯಸಿಂಗ್ ಕಲ್ಯಾಣಕ್ಕೆ ಕಾಲಿಟ್ಟ ನಂತರ ಓಲೈಕೆ, ತುಷ್ಟೀಕರಣ ರಾಜಕಾರಣ ಮಾಡುತ್ತ ಜಾತಿ, ಧರ್ಮಗಳ ಮಧ್ಯೆ ಮನಸ್ತಾಪ ಸೃಷ್ಟಿಸುತಿದ್ದಾರೆ.-ಶರಣು ಸಲಗರ್, ಬಸವಕಲ್ಯಾಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.