ADVERTISEMENT

ಕಬ್ಬು ಬೆಳೆಗಾರರ ಧರಣಿ 4ನೇ ದಿನಕ್ಕೆ: ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:00 IST
Last Updated 17 ನವೆಂಬರ್ 2025, 6:00 IST
ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಬೀದರ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬಿಜೆಪಿ ಮುಖಂಡರೂ ಆದ ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ಭಾನುವಾರ ಭೇಟಿ ಕೊಟ್ಟು, ಮಾತನಾಡಿದರು
ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಬೀದರ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬಿಜೆಪಿ ಮುಖಂಡರೂ ಆದ ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ಭಾನುವಾರ ಭೇಟಿ ಕೊಟ್ಟು, ಮಾತನಾಡಿದರು   

ಬೀದರ್‌: ಪ್ರತಿ ಟನ್‌ ಕಬ್ಬಿಗೆ ₹3,200 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಬೀದರ್‌ ಜಿಲ್ಲಾ ಸಂಯುಕ್ತ ಕಿಸಾನ್‌ ಮೋರ್ಚಾ (ರೈತ ಸಂಘಗಳ ಒಕ್ಕೂಟ) ನೇತೃತ್ವದಲ್ಲಿ ರೈತರು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತು.

ಜಿಲ್ಲೆಯ ವಿವಿಧ ಭಾಗಗಳ ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಅವರು ಧರಣಿ ಸ್ಥಳಕ್ಕೆ ತೆರಳಿ, ರೈತರಿಗೆ ಬೆಂಬಲ ಸೂಚಿಸಿದರು. 

ಭಗವಂತ ಖೂಬಾ ಮಾತನಾಡಿ, ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ರೈತರ ಹೋರಾಟ ನ್ಯಾಯಸಮ್ಮತ ಮತ್ತು ಭಾವನಾತ್ಮಕ ಬೇಡಿಕೆಯಾಗಿದೆ. ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ನಿಗದಿಪಡಿಸಬೇಕು. ಆದರೆ, ನಮ್ಮ ಜಿಲ್ಲೆಯ ರೈತರು ತಮ್ಮ ಹೃದಯ ವೈಶಾಲ್ಯತೆ ತೋರಿಸಿ ₹3,100ರಿಂದ ₹3,200ಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಸ್ಪಂದಿಸದಿರುವ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಒಳ್ಳೆಯದಾಗುವುದಿಲ್ಲ. ರೈತರ ಕಳಕಳಿ ಶಾಪ ತಟ್ಟುತ್ತದೆ ಎಂದು ಟೀಕಿಸಿದರು.

ADVERTISEMENT

ರೈತರು ಸದುದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ನಾನು ನನ್ನ ತನು–ಮನ–ಧನದಿಂದ ರೈತರ ಜೊತೆ ನಿಲ್ಲುತ್ತೇನೆ. ಬಿಜೆಪಿಯ ನಾಲ್ವರು ಶಾಸಕರು ಈ ವಿಷಯವಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಅಲ್ಲಿನ ಸಚಿವರು ಭೇಟಿ ನೀಡಿದರೂ ಬೀದರ್‌ ಜಿಲ್ಲೆಯ ಇಬ್ಬರು ಸಚಿವರು ರೈತರತ್ತ ಗಮನ ಹರಿಸಿಲ್ಲ. ಇವರು ಬೇಷರಮ್ ಮಂತ್ರಿಗಳು ಎಂದು ಕಿಡಿಕಾರಿದರು.

ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ರೈತರಿಗೆ ಸಾಲ ನೀಡುವ ಬದಲು ಬಡ್ಡಿ ವಸೂಲಿ ಮಾಡುವವರಂತೆ ವರ್ತಿಸುತ್ತಿದ್ದಾರೆ. ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಸಹೋದರನಿಗೆಬುದ್ದಿ ಹೇಳಬೇಕು. ರೈತರ ಜೊತೆಗೆ ಆಟವಾಡುವುದನ್ನು ನಿಲ್ಲಿಸಬೇಕು ಎಂದು ಖೂಬಾ ಒತ್ತಾಯಿಸಿದರು.

2020–21ರಲ್ಲಿ ಬೀದರ್‌ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳೊಂದಿಗೆ ಸಭೆ ನಡೆಸಿ ಕಬ್ಬಿನ ಬೆಲೆಯನ್ನು ₹1400ರಿಂದ ₹2,250ಕ್ಕೆ ಏರಿಸಲು ನಾನು ಶ್ರಮಿಸಿದ್ದೆ. ಉಸ್ತುವಾರಿ ಸಚಿವರು ರೈತರ ಹೋರಾಟದತ್ತ ಮುಖ ಮಾಡಿಯೂ ನೋಡಿರಲಿಲ್ಲ. ತಮ್ಮ ಸಹೋದರನ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಶ್ರೀಮಂತ ಬಿರಾದಾರ, ಪ್ರಕಾಶ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೊಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿ, ವಿಠಲ್ ರಾವ್‌, ನಾಗಶೆಟ್ಟಿ, ಭೀಮರಾವ್‌, ಖಮರ್‌ ಪಟೇಲ್ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.