ADVERTISEMENT

ಸಚಿವ ಖಂಡ್ರೆ ಟೈಮ್‌ ಪಾಸ್‌ ವಿಸಿಟ್‌: ಭಗವಂತ ಖೂಬಾ ಟೀಕೆ

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:12 IST
Last Updated 19 ನವೆಂಬರ್ 2025, 5:12 IST
ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಬೀದರ್‌ನಲ್ಲಿ ಮಂಗಳವಾರ ಧರಣಿ ನಡೆಸಲಾಯಿತು
ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಬೀದರ್‌ನಲ್ಲಿ ಮಂಗಳವಾರ ಧರಣಿ ನಡೆಸಲಾಯಿತು   

ಬೀದರ್‌: ‘ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ರೈತರು ನಗರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ಕೊಟ್ಟು, ಅವರ ನ್ಯಾಯಯುತ ಬೇಡಿಕೆ ಈಡೇರಿಸಿಲ್ಲ. ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು, ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿ ಟೈಮ್‌ ಪಾಸ್‌ ವಿಸಿಟ್‌ ಕೊಟ್ಟಿದ್ದಾರೆ’ ಎಂದು ಬಿಜೆಪಿ ಮುಖಂಡರೂ ಆದ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

ರೈತರ ಧರಣಿ ಸ್ಥಳಕ್ಕೆ ಮೂರು ದಿನಗಳ ಹಿಂದೆ ನಾನು ಹೋಗಿ ಬೆಂಬಲ ಸೂಚಿಸಿದ್ದೆ. ಖಂಡ್ರೆ ರಾಜಕಾರಣದ ವಿರುದ್ಧ ಹರಿಹಾಯ್ದಿದ್ದೆ. ಇದಾದ ಬಳಿಕ ಖಂಡ್ರೆ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಧರಣಿ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ರೈತರೊಂದಿಗೆ ಸಭೆ ಮಾಡಿರುವುದು ಖಂಡನಾರ್ಹ. ಶಾಂತ ರೀತಿಯಿಂದ ಧರಣಿ ನಡೆಸುತ್ತಿರುವ ರೈತರ ಮುಂದೆ ಈಶ್ವರ ಖಂಡ್ರೆ ಪೊಲೀಸ್ ಶಕ್ತಿ ತೋರಿಸಿದ್ದಾರೆ. ಇದು ರೈತರನ್ನು ಅವಮಾನಿಸುವ, ಹೆದರಿಸುವ ತಂತ್ರ ಎಂದು ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ರೈತ ಮಹಿಳೆ ಶೀಲಾತಾಯಿ ಹೊಳಸಮುದ್ರ ಅವರು ‘ಮುಖ್ಯಮಂತ್ರಿಗಳೇ ಬೆಳಗಾವಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,300 ನೀಡುವಂತೆ ಸೂಚಿಸಿದ್ದಾರೆ, ನಮಗೂ ಕೊಡಿಸಬೇಕು’ ಎಂದು ಮನವಿ ಮಾಡಿದಾಗ, ನಿಮಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲಮ್ಮ ಎಂದು ಸಚಿವರು ಗದರಿ, ದರ್ಪ ತೋರಿದ್ದಾರೆ. ರೈತ ಮಹಿಳೆ ಕೇಳಿರುವುದರಲ್ಲಿ ತಪ್ಪೇನಿದೆ? ಬೆಳಗಾವಿ ಏನು ಬೇರೆ ರಾಜ್ಯದಲ್ಲಿದೆಯಾ ? ಬೆಳಗಾವಿಗೊಂದು ನ್ಯಾಯ, ಬೀದರ್ ಜಿಲ್ಲೆಗೊಂದು ನ್ಯಾಯಾನಾ? ಕೂಡಲೇ ಆ ರೈತ ಮಹಿಳೆಗೆ ಖಂಡ್ರೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಉಸ್ತುವಾರಿ ಸಚಿವರಾಗಿ ಈಶ್ವರ ಖಂಡ್ರೆ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬಿಡಬೇಕು. ಸ್ವಾರ್ಥ ಬದಿಗಿಟ್ಟು ರೈತರಿಗೆ ಅವರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ದರ ಕೊಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇದೆ ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಧರಣಿ 6ನೇ ದಿನಕ್ಕೆ ಪ್ರತಿ ಟನ್‌ ಕಬ್ಬಿಗೆ ₹3200 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಬೀದರ್‌ ಜಿಲ್ಲಾ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರು ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಸಮೀಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಆರನೇ ದಿನಕ್ಕೆ ಕಾಲಿರಿಸಿದೆ. ವಿವಿಧ ಭಾಗಗಳ ರೈತರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ರೈತರು ಬೇಡಿಕೆ ಈಡೇರಿಸುವ ತನಕ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದ್ದರಿಂದ ಮಾತುಕತೆ ಫಲಪ್ರದವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.