ಭಾಲ್ಕಿ: ತಾಲ್ಲೂಕಿನ ದಾಡಗಿ ಕ್ರಾಸ್ ಸಮೀಪದ ಬಸವಣ್ಣನವರ ಪ್ರತಿಮೆಗೆ ಈಚೆಗೆ ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ತಗುಲಿ ಬಸವಣ್ಣನವರ ಪ್ರತಿಮೆ ವಿರೂಪಗೊಂಡಿದ್ದು, ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಖಟಕಚಿಂಚೋಳಿ ಪಿಎಸ್ಐ ಸುದರ್ಶನ ರೆಡ್ಡಿ ತಿಳಿಸಿದ್ದಾರೆ.
ಘಟನೆ ಸಂಬಂಧ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರೀಶೀಲಿಸಿದಾಗ ಅಂದು ಮಧ್ಯರಾತ್ರಿ ಆ ಮಾರ್ಗವಾಗಿ ಘೋಡವಾಡಿಯಿಂದ ಕಬ್ಬು ತೆಗೆದುಕೊಂಡು ಉದಗೀರ್ ಕಡೆಗೆ ಇದೊಂದೇ ಟ್ರ್ಯಾಕ್ಟರ್ ಸಾಗಿತ್ತು. ಈ ಟ್ರ್ಯಾಕ್ಟರ್ ತೆರಳಿದ ಸಂಪೂರ್ಣ ಮಾಹಿತಿ ಕಲೆ ಹಾಕಿದಾಗ ಉದಗೀರ್‌ನ ವಿಲಾಸ ಶುಗರ್ ಫ್ಯಾಕ್ಟರಿಯಲ್ಲಿ ಟ್ರ್ಯಾಕ್ಟರ್ ಪತ್ತೆಯಾಗಿತ್ತು. ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ನಿರ್ಲಕ್ಷ್ಯದಿಂದಲೇ ಪ್ರತಿಮೆ ವಿರೂಪಗೊಂಡಿದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪಿಎಸ್ಐ ಸುದರ್ಶನ ರೆಡ್ಡಿ ತಿಳಿಸಿದರು.
ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಥ ಘಟನೆಗಳು ನಡೆಯದಂತೆ ತಡೆಯಲು ದಾಡಗಿ ಕ್ರಾಸ್ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ರಸ್ತೆ ಅಗಲೀಕರಣ ಕಾರ್ಯ ಹಾಗೂ ನೂತನ ಬಸವಣ್ಣನವರ ಮೂರ್ತಿ ಸ್ಥಾಪನೆ ಶೀಘ್ರದಲ್ಲಿ ಆಗಬೇಕು ಎಂಬುದು ಬಸವಭಕ್ತರ ಒತ್ತಾಯ.
ಮಂಗಳವಾರ (ಜ.14) ಮಧ್ಯರಾತ್ರಿ ಕಿಡಿಗೇಡಿಗಳು ಬಸವಣ್ಣನವರ ಪ್ರತಿಮೆಯ ಬಲಗೈಯನ್ನು ಕತ್ತರಿಸಿ, ಷಟಸ್ಥಲ ಧ್ವಜ ಬೀಳಿಸಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿ ಬುಧವಾರ ದಾಡಗಿ ಗ್ರಾಮಸ್ಥರು, ತಾಲ್ಲೂಕಿನ ಬಸವ ಭಕ್ಕರು ಸೇರಿಕೊಂಡು ಹುಮನಾಬಾದ್-ಭಾಲ್ಕಿ-ಬಸವಕಲ್ಯಾಣ ಮಾರ್ಗದ ರಸ್ತೆ ಸಂಚಾರ ತಡೆದು, ಟೈರ್‌ಗೆ ಬೆಂಕಿಹಚ್ಚುವ ಮೂಲಕ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.