ADVERTISEMENT

ಬಹುಬೆಳೆ ಪದ್ಧತಿ ಅನುಸರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:44 IST
Last Updated 30 ಮೇ 2025, 15:44 IST
ಔರಾದ್ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಆರ್.ಎಲ್. ಜಾಧವ್ ಇತರರು ಹಾಜರಿದ್ದರು
ಔರಾದ್ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಆರ್.ಎಲ್. ಜಾಧವ್ ಇತರರು ಹಾಜರಿದ್ದರು   

ಔರಾದ್: ‘ಕೆಲ ವರ್ಷಗಳಿಂದ ರೈತರು ಸೋಯಾಬಿನ್ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಬೇರೆ ಬೇರೆ ಬೆಳೆಗಳನ್ನು ಬೆಳೆಸಬೇಕು’ ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಆರ್.ಎಲ್. ಜಾಧವ ಹೇಳಿದರು.

ಇಲ್ಲಿಯ ರೈತ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಹಾಗೂ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಬಹು ಬಳೆ ಪದ್ಧತಿ ತುಂಬಾ ಅನುಕೂಲಕರವಾಗಿದೆ. ವರ್ಷಕ್ಕೆ ಒಂದೇ ಹೊಲದಲ್ಲಿ ಎರಡು ಅಥವಾ ಹೆಚ್ಚಿನ ಬೆಳೆ ಬೆಳೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಬರುತ್ತದೆ ಎಂಬ ಧೈರ್ಯ ಇರುತ್ತದೆ. ಈ ರೀತಿ ಮಿಶ್ರ ಕೃಷಿ ಹಳೆಯ ಪದ್ಧತಿ ಆಗಿದ್ದರೂ ಅಧುನಿಕ ಪದ್ಧತಿಯಿಂದ ಹೆಚ್ಚಿನ ಅನುಕೂಲ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಹೇಳಿದರು.

ಜಿಲ್ಲೆಯ ರೈತರು ಉದ್ದು ಬೆಳೆ ಬೆಳೆಯಲು ಗಮನ ಹರಿಸಬೇಕು. ಇದು ಮುಂಗಾರು ಹಂಗಾಮಿನ ಬೆಳೆಯಾಗಿದ್ದು, ಸುಧಾರಿತ ಬೇಸಾಯ ಕ್ರಮ ಅನುಸರಿಸಿದರೆ ರೈತರಿಗೆ ತುಂಬಾ ಅನುಕೂಲವಿದೆ’ ಎಂದು ಸಲಹೆ ನೀಡಿದರು.

ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದ ಶಾಸಕ ಪ್ರಭು ಚವಾಣ್ ಮಾತನಾಡಿ, ‘ತಾಲ್ಲೂಕಿನ ರೈತರಿಗೆ ಬಿತ್ತನೆ ಬೀಜ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಹಾಗೂ ಅಧಿಕೃತ ಸಂಸ್ಥೆಯಿಂದ ಖರೀದಿಸಿದ ಬೀಜ ಮಾತ್ರ ವಿತರಿಸಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಹಣ ಪಡೆಯಬಾರದು. ಯಾವುದೇ ಕಾರಣಕ್ಕೂ ಇಲ್ಲಿನ ಬೀಜ ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಹೋಗಬಾರದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಮಾತನಾಡಿ ‘ರೈತರ ಬೇಡಿಕೆಗೆ ತಕ್ಕಂತೆ ಬೀಜದ ದಾಸ್ತಾನು ಮಾಡಲಾಗಿದೆ. ಚೀಟಿ ಹಾಕುವ ಮೂಲಕ ಗ್ರಾಮ ಪಂಚಾಯಿತಿವಾರು ಬಿತ್ತನೆ ಬೀಜ ವಿತರಿಸಲಾಗುವುದು’ ಎಂದು ಹೇಳಿದರು.

ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಆರತಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕೃಷಿ ಸಮಾಜದ ಅಧ್ಯಕ್ಷ ಸಂತೋಷ ಹಜಾರಿ, ರೈತ ಮುಖಂಡ ಶ್ರೀಮಂತ ಬಿರಾದಾರ, ಪ್ರಕಾಶ ಬಾವುಗೆ, ಕಲ್ಲಪ್ಪ ದೇಶಮುಖ, ಶಿವರಾಜ ಅಲ್ಮಾಜೆ, ದಯಾನಂದ ಘುಳೆ, ರಾಮಶೆಟ್ಟಿ ಪನ್ನಾಳೆ, ಗೋವಿಂದ ಇಂಗಳೆ, ಕೃಷಿ ಅಧಿಕಾರಿ ಸ್ವಾತಿ, ಅಂಬರೇಶ, ಪಾಂಡುರಂಗ ಪಾಟೀಲ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ರೈತರು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.