
ಬೀದರ್: ತಾಲ್ಲೂಕಿನ ಇಮಾಮಪುರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ, ದಿವಂಗತ ಗುರುಪಾದಪ್ಪ ಗುರುಪಾದಪ್ಪ ನಾಗಮಾರಪಳ್ಳಿ ಅವರ ಮಗ ಸೂರ್ಯಕಾಂತ ನಾಗಮಾರಪಳ್ಳಿ ಅವರ ಪೆನಾಲ್ ಹಾದಿ ಸುಗಮಗೊಂಡಿದೆ.
ಇದರೊಂದಿಗೆ ಸೂರ್ಯಕಾಂತ ಅವರು ಕಾರ್ಖಾನೆಯ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಎನ್‌ಎಸ್‌ಎಸ್‌ಕೆಯ ಆಡಳಿತ ಮಂಡಳಿ ನಿರ್ದೇಶಕರ ಒಟ್ಟು 13 ಸ್ಥಾನಗಳಿಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಉಮಾಕಾಂತ ನಾಗಮಾರಪಳ್ಳಿ ಸೇರಿದಂತೆ ನಾಲ್ವರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಚುನಾವಣೆ ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್ ಇದರ ಬಗ್ಗೆ ಆಸಕ್ತಿ ತೋರಿರಲಿಲ್ಲ. ಜೆಡಿಎಸ್ ನಿಶ್ಚಿಂತೆಯಿಂದ ಇತ್ತು. ಆದರೆ, ಮೈತ್ರಿಯಿದ್ದರೂ ಸಹ ಬಿಜೆಪಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿತ್ತು. ಮೈತ್ರಿ ಪಕ್ಷಗಳು ಮುಖಾಮುಖಿ ಆಗಿದ್ದವು.
ಮತದಾರರ ಪಟ್ಟಿಯಲ್ಲಿ ದೋಷವಿದೆ, ಪಾರದರ್ಶಕ ಚುನಾವಣೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ತಡೆಯಾಜ್ಞೆ ತೆರವಾದ ನಂತರ ಬಿಜೆಪಿ ತನ್ನ ವರಸೆ ಬದಲಿಸಿ, ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ. ‘ರೈತರ ಹಿತದೃಷ್ಟಿಯಿಂದ ಕಣದಿಂದ ಹಿಂದೆ ಸರಿದಿರುವುದಾಗಿ ಬಿಜೆಪಿ ಘೋಷಿಸಿದೆ. ಆದರೆ, ಚುನಾವಣೆಯಲ್ಲಿ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳಲು ಈ ತೀರ್ಮಾನಕ್ಕೆ ಬಂದಿದೆ ಎಂದು ಗೊತ್ತಾಗಿದೆ. ಈಗಾಗಲೇ ನಾಮಪತ್ರ ಹಿಂಪಡೆಯುವ ದಿನಾಂಕ ಕೊನೆಗೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರಂಭದಲ್ಲಿ ಭಾರಿ ಉತ್ಸಾಹ ತೋರಿಸಿ, ಬಿಜೆಪಿ ಕಣಕ್ಕಿಳಿಸಿದ್ದ ಅಭ್ಯರ್ಥಿಗಳಿಗೆ ಈಗ ದಿಕ್ಕು ತೋಚದಂತಾಗಿದೆ.
ಹೀಗೆ ಪ್ರತಿಷ್ಠೆಯ ಕಣವಾಗಿದ್ದ ಎನ್‌ಎಸ್‌ಎಸ್‌ಕೆ ಚುನಾವಣೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ದೂರ ಉಳಿದಿರುವುದರಿಂದ ಜೆಡಿಎಸ್‌ನವರ ಹಾದಿ ಸುಗಮಗೊಂಡಿದೆ. ಒಂಬತ್ತು ಸ್ಥಾನಗಳಲ್ಲೂ ಸೂರ್ಯಕಾಂತ ನಾಗಮಾರಪಳ್ಳಿ ಪೆನಾಲ್‌ಗೆ ಸೇರಿದವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದ್ದು, ಚುನಾವಣೆ ಪ್ರಕ್ರಿಯೆ ಔಪಚಾರಿಕತೆಗೆ ಸೀಮಿತವಾಗಿದೆ ಎಂಬ ಮಾತುಗಳು ಸಹಕಾರಿ ವಲಯದಲ್ಲಿ ಕೇಳಿ ಬರುತ್ತಿವೆ.
ಎನ್‌ಎಸ್‌ಎಸ್‌ಕೆ ಚುನಾವಣೆ ನಾಳೆ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 9 ನಿರ್ದೇಶಕರ ಸ್ಥಾನಗಳಿಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಒಟ್ಟು 13 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ನಾಲ್ವರು ಅವಿರೋಧ ಆಯ್ಕೆಗೊಂಡಿದ್ದಾರೆ.
ಸಚಿವರಿಗೇಕಿಲ್ಲ ಆಸಕ್ತಿ?
ಎನ್‌ಎಸ್‌ಎಸ್‌ಕೆಗೆ ಚುನಾವಣೆ ಘೋಷಣೆಯಾದ ದಿನದಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಾಗಲಿ ಅವರ ಪಕ್ಷ ಕಾಂಗ್ರೆಸ್ ಆಗಲಿ ಸ್ಪರ್ಧೆ ಬಗ್ಗೆ ಆಸಕ್ತಿ ತೋರಿಲ್ಲ. ಎನ್‌ಎಸ್‌ಎಸ್‌ಕೆ ಸಾಲದ ಸುಳಿಯಲ್ಲಿ ಸಿಲುಕಿರುವುದು ಕೂಡ ಇದಕ್ಕೆ ಮುಖ್ಯ ಕಾರಣ ಎಂದು ಗೊತ್ತಾಗಿದೆ. ಎನ್‌ಎಸ್‌ಎಸ್‌ಕೆ ಮುನ್ನಡೆಸಿಕೊಂಡು ಹೋಗುವುದು ಈಗ ಸುಲಭದ ಮಾತಲ್ಲ. ಈ ಕಾರಣಕ್ಕಾಗಿಯೇ ಸಚಿವರು ಈ ಚುನಾವಣೆಗೆ ಆಸಕ್ತಿ ತೋರಿಲ್ಲ ಎಂಬ ಚರ್ಚೆ ಸಹಕಾರಿ ವಲಯದಲ್ಲಿದೆ. ಖಂಡ್ರೆ ಮನೆತನದ ಮೂವರು ಈಗ ರಾಜಕೀಯ ಹಾಗೂ ಸಹಕಾರ ವಲಯದ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈಶ್ವರ ಬಿ. ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಅವರ ಮಗ ಸಾಗರ್ ಖಂಡ್ರೆ ಅವರು ಸಂಸದ ಹಾಗೂ ಅವರ ಸಹೋದರ ಅಮರ್ ಕುಮಾರ್ ಖಂಡ್ರೆ ಅವರು ಡಿಸಿಸಿ ಬ್ಯಾಂಕ್ ಹಾಗೂ ಎಂಜಿಎಸ್‌ಎಸ್‌ಕೆ ಅಧ್ಯಕ್ಷರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.