ADVERTISEMENT

ಹೈನುಗಾರಿಕೆಯಿಂದ ಕೃಷಿಯಲ್ಲಿ ಸುಸ್ಥಿರತೆ– ಡಾ. ದಿಲೀಪಕುಮಾರ

ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ದಿಲೀಪಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:29 IST
Last Updated 18 ಜನವರಿ 2022, 16:29 IST
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ದಿಲೀಪಕುಮಾರ ಉದ್ಘಾಟಿಸಿದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಅಕ್ಷಯಕುಮಾರ, ಡಾ. ಸುನೀಲಕುಮಾರ ಎನ್.ಎಂ ಇದ್ದರು
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ದಿಲೀಪಕುಮಾರ ಉದ್ಘಾಟಿಸಿದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಅಕ್ಷಯಕುಮಾರ, ಡಾ. ಸುನೀಲಕುಮಾರ ಎನ್.ಎಂ ಇದ್ದರು   

ಜನವಾಡ: ಹೈನುಗಾರಿಕೆಯಿಂದ ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಬಹುದು ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ದಿಲೀಪಕುಮಾರ ಹೇಳಿದರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರೈತರಿಂದ ರೈತರಿಗೆ ಪ್ರಸಾರವಾಗುವ ತಾಂತ್ರಿಕತೆಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಸುಧಾರಿತ ಹೈನುಗಾರಿಕೆ ತಾಂತ್ರಿಕತೆಗಳನ್ನು ರೈತರು ಇತರರಿಗೂ ಪರಿಚಯಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಕಲಬುರ್ಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಶಾಲಿವಾನ್ ವಾಡೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ವಿಪುಲ ಅವಕಾಶಗಳು ಇವೆ. ಹಾಲು ಉತ್ಪಾದಕರು ಗುಂಪು ರಚಿಸಿಕೊಳ್ಳುವ ಮೂಲಕ ಹಾಲಿಗೆ ಮಾರುಕಟ್ಟೆ ಹಾಗೂ ಆಕರ್ಷಕ ಬೆಲೆ ಪಡೆಯಬಹುದು ಎಂದು ತಿಳಿಸಿದರು.

ಒಕ್ಕೂಟದಿಂದ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಗಿದೆ. ಇನ್ನೂ 250 ಸಂಘಗಳ ರಚನೆಗೆ ಯೋಜನೆ ರೂಪಿಸಲಾಗಿದೆ. ನಂದಿನಿಯ 54 ಮಳಿಗೆಗಳು ಹಾಲು ಹಾಗೂ ಹಾಲಿನ ವಿವಿಧ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಮಾತನಾಡಿ, ರೈತರು ತಮ್ಮ ಕಸುಬುಗಳಿಗೆ ವೈಜ್ಞಾನಿಕ ಸ್ಪರ್ಶ ನೀಡಿದ್ದಲ್ಲಿ ಮಾತ್ರ ವೃತ್ತಿಪರತೆ ಸಾಧಿಸಬಹುದು. ಗುಣಮಟ್ಟದ ಕೃಷಿ ಉತ್ಪನ್ನ ಉತ್ಪಾದಿಸಬಹುದು. ಶುದ್ಧ ಹಾಲಿಗೆ ಈಗ ಬಹು ಬೇಡಿಕೆ ಇದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಆಧುನಿಕ ತಂತ್ರಜ್ಞಾನಗಳ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ತರಬೇತಿ ಸಂಯೋಜಕ ಡಾ. ಅಕ್ಷಯಕುಮಾರ ಮಾತನಾಡಿ, ಹೈನುಗಾರಿಕೆ ರೈತರಿಗೆ ನಿರಂತರ ಆದಾಯ ತಂದುಕೊಡುವ ಉಪ ಕಸುಬು ಆಗಿದೆ ಎಂದು ತಿಳಿಸಿದರು.

ಡಾ. ದೀಪಕ್ ಪಾಟೀಲ, ಡಾ. ಕಿರಣ ಉಪಸ್ಥಿತರಿದ್ದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು. ಡಾ. ಆರ್.ಎಲ್. ಜಾಧವ್ ಸ್ವಾಗತಿಸಿದರು. ಡಾ. ರಾಜೇಶ್ವರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.