
ಬೀದರ್: ‘ನೈಸರ್ಗಿಕ ಮತ್ತು ಸುಸ್ಥಿರ ಸಾವಯವ ಕೃಷಿಯಿಂದ ರೈತರು ಮತ್ತು ಭಾರತ ಸ್ವಾವಲಂಬಿ ದೇಶವಾಗಲು ಸಾಧ್ಯ’ ಎಂದು ಮಹಾರಾಷ್ಟ್ರ ನಾಂದೇಡ್‌ನ ಪ್ರಗತಿಪರ ಕೃಷಿಕ ಭೂಷಣ್ ಬಿ.ಕೆ. ಭಗವಾನ್ ತಿಳಿಸಿದರು.
ಜಿಲ್ಲಾ ಕೃಷಿ ಇಲಾಖೆ ಮತ್ತು ಬ್ರಹ್ಮಾಕುಮಾರೀಸ್ ಕೇಂದ್ರದ ಸಹಯೋಗದಲ್ಲಿ ನಗರದ ರಾಂಪುರೆ ಕಾಲೊನಿಯಲ್ಲಿರುವ ಶಿವಶಕ್ತಿ ಭವನದಲ್ಲಿ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ತರಬೇತಿ ಮತ್ತು ರೈತರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೃಷಿ ಭಾರತ ದೇಶದ ಬೆನ್ನೆಲುಬು. ಆದರೆ, ನೈಸರ್ಗಿಕ ಮತ್ತು ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ದೀರ್ಘಕಾಲ ಇರುತ್ತದೆ. ಇಳುವರಿಯೂ ಹೆಚ್ಚಿಗೆ ಬರುತ್ತದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ತಾಯಿ ಆರೋಗ್ಯವಾಗಿದ್ದರೆ ಮಗು ಆರೋಗ್ಯವಾಗಿರುತ್ತದೆ. ಅದೇ ರೀತಿ ಭೂಮಿ ತಾಯಿ ಆರೋಗ್ಯವಾಗಿದ್ದರೆ ಉತ್ತಮ ಫಲವತ್ತಾದ ಬೆಳೆಯು ದೊರೆಯುತ್ತದೆ ಎಂದು ಹೇಳಿದರು
ಕೃಷಿ ಇಲಾಖೆಯ ಉಪ ನಿರ್ದೇಶಕ ಅನ್ಸಾರಿ ಮಾತನಾಡಿ, ರಾಸಾಯನಿಕ ರಹಿತ ಕೃಷಿಯು ಭೂಮಿಯ ಆರೋಗ್ಯವನ್ನು ಕಾಪಾಡುತ್ತದೆ. ರೈತನ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಪ್ರತಿ ತಾಲ್ಲೂಕಿನಿಂದ ಆಯ್ದ ರೈತರನ್ನು ಸಾವಯವ ಕೃಷಿ ತರಬೇತಿಗಾಗಿ ಮೌಂಟ್ ಅಬುಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಬ್ರಹ್ಮಾಕುಮಾರೀಸ್ ಕೇಂದ್ರ ಶಿವಶಕ್ತಿ ಭವನದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುನಂದಾ ಬಹೆನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಆರತಿ ಪಾಟೀಲ, ಬಿ.ಕೆ. ಮಹೇಶ್, ಬಿ.ಕೆ. ಪಾರ್ವತಿ ಬಹೆನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.