ADVERTISEMENT

ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಿನ ಭರವಸೆ ನೀಡಿದ ಸಚಿವ ಚವಾಣ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 3:38 IST
Last Updated 9 ಜುಲೈ 2021, 3:38 IST
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಟ್ಯಾಬ್ ವಿತರಿಸಿದರು
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಟ್ಯಾಬ್ ವಿತರಿಸಿದರು   

ಔರಾದ್: ‘ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಓದುವುದಕ್ಕೆ ಹಿಂದೇಟು ಹಾಕಬಾರದು. ಸರ್ಕಾರ ಅಂತಹ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.

‘ಶಿಕ್ಷಣದ ವಿಷಯದಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಈ ಪ್ರಯುಕ್ತ ರಾಜ್ಯದ ತಾಂತ್ರಿಕ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ಮುಂದೆ ಬರಬೇಕು. ಇಲ್ಲಿಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಸಿಗಬೇಕು ಎಂಬ ಕಾರಣದಿಂದ
ತಾವು ಮೊದಲ ಬಾರಿಗೆ ಶಾಸಕರಾದ ನಂತರ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಿದ್ದೇನೆ’ ಎಂದು ಹೇಳಿದರು.

‘ಆರ್ಥಿಕ ತೊಂದರೆ ಎದುರಿಸುವ ಬಡ ವಿದ್ಯಾರ್ಥಿಗಳಿಗೆ ವೈಯಕ್ತಿಕ ನೆರವು ನೀಡಲು ನಾನು ಸದಾ ಸಿದ್ಧ. ಅಂತಹ ವಿದ್ಯಾರ್ಥಿಗಳ ಪಾಲಕರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು’ ಎಂದು ಸಚಿವರು ತಿಳಿಸಿದರು.

ಪ್ರಾಂಶುಪಾಲ ವಿಜಯಕುಮಾರ ಜಾಧವ್ ಮಾತನಾಡಿ, ‘ಪಾಲಿಟೆಕ್ನಿಕ್ ಒಟ್ಟು 66 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಹೇಳಿದರು.

ಧುರೀಣ ಬಂಡೆಪ್ಪ ಕಂಟೆ, ರಮೇಶ ದೇವಕತೆ, ಶೇಷಾರಾವ, ಕೇರಬಾ ಪವಾರ್, ಕಿರಣ ಪಾಟೀಲ, ಪ್ರಕಾಶ ಅಲ್ಮಾಜೆ, ಎನ್‍ಎಸ್‍ಎಸ್ ಅಧಿಕಾರಿ ಅರುಣ ಮೊಕಾಶಿ, ಉತ್ತಮಕುಮಾರ ಉಪಸ್ಥಿತರಿದ್ದರು.

ಉಪನ್ಯಾಸಕ ಸದಾಶಿವಪ್ಪ ಸ್ವಾಗತಿಸಿದರು. ಮಹೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.