ADVERTISEMENT

ಹೃದಯ ಆರೋಗ್ಯ ಕಾಳಜಿ ವಹಿಸಿ

ಹೃದಯ ತಜ್ಞ ಡಾ. ಶ್ರೀಕಾಂತ ರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 13:40 IST
Last Updated 19 ಅಕ್ಟೋಬರ್ 2020, 13:40 IST
ಬೀದರ್‌ನ ಐಎಂಎ ಹಾಲ್‍ನಲ್ಲಿ ನಡೆದ ‘ಹೃದಯ ಆರೋಗ್ಯ’ ಜಾಗೃತಿ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞ ಡಾ.ಶ್ರೀಕಾಂತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಐಎಂಎ ಹಾಲ್‍ನಲ್ಲಿ ನಡೆದ ‘ಹೃದಯ ಆರೋಗ್ಯ’ ಜಾಗೃತಿ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞ ಡಾ.ಶ್ರೀಕಾಂತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಪ್ರಸ್ತುತ ಎಲ್ಲ ವಯೋಮಾನದವರಲ್ಲೂ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಹೃದಯ ಆರೋಗ್ಯ ಕಾಳಜಿ ವಹಿಸಬೇಕು. ಎಂದು ಹೃದಯ ರೋಗ ತಜ್ಞ ಡಾ. ಶ್ರೀಕಾಂತ ರೆಡ್ಡಿ ಹೇಳಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ‘ಹೃದಯ ಆರೋಗ್ಯ ಕಾಪಾಡುವುದು ಹೇಗೆ?’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದಲಾದ ಜೀವನ ಶೈಲಿ, ಹೃದಯದ ಮೇಲೆ ಒತ್ತಡ, ವ್ಯಾಯಾಮ ಕೊರತೆ, ಮಾದಕ ವಸ್ತುಗಳ ಸೇವನೆ ಮೊದಲಾದವು ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿವೆ’ ಎಂದು ಹೇಳಿದರು.

ADVERTISEMENT

‘ಹೃದಯ ಕಾಯಿಲೆಗಳಿಂದ ದೂರ ಇರಲು ಒತ್ತಡ ರಹಿತ ಜೀವನ ನಡೆಸಬೇಕು. ವ್ಯಾಯಾಮ, ರಕ್ತ
ದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ತೂಕ ಕಡಿಮೆ ಇಟ್ಟುಕೊಳ್ಳಬೇಕು. ಮಾದಕ ವಸ್ತುಗಳ ಚಟಗಳನ್ನು ತ್ಯಜಿಸುವುದು ಸೇರಿದಂತೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಹೃದಯಕ್ಕೆ ಸಂತಸ ಉಂಟು ಮಾಡುವ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮುನ್ನೆಚ್ಚರಿಕೆ ಹಾಗೂ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ಹೃದಯ ಸಂಬಂಧಿ ಸಮಸ್ಯೆಯ ತೀವ್ರತೆಯನ್ನು ತಗ್ಗಿಸಬಹುದಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಮಾತನಾಡಿ, ‘ಕ್ಲಬ್ ವತಿಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ, ರೋಟರಿ ಜಿಲ್ಲೆ 3160 ಕಾರ್ಯದರ್ಶಿ ಡಾ. ರಘು ಕೃಷ್ಣಮೂರ್ತಿ, ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚುರಿ ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಚೇತನ್ ಮೇಗೂರ್, ಡಾ. ಶರಣ ಬುಳ್ಳಾ, ಡಾ. ನಿತೇಶ ಬಿರಾದಾರ, ರಿಷಿಕೇಶ ಪಾಟೀಲ,
ಡಾ. ಉಮೇಶ ಮಾಲಿಪಾಟೀಲ, ಡಾ. ಉಝೇರ್, ಭಡೆಪ್ಪ, ರಾಜು ಅಳ್ಳೆ, ಶಿವಕುಮಾರ ಪಾಖಲ್, ಡಾ. ಸಂಗಮೇಶ ಕುಣಕೆರೆ, ಕಾಮಶೆಟ್ಟಿ ಚಿಕ್ಕಬಸೆ, ಡಾ. ಸತೀಶ ಬಿರಾದಾರ, ಡಾ. ಶಿಲ್ಪಾ ಬುಳ್ಳಾ ಇದ್ದರು.

ಕ್ಲಬ್ ಖಜಾಂಚಿ ಡಾ. ರಿತೇಶ ಸುಲೆಗಾಂವ ನಿರೂಪಿಸಿದರು. ಸತೀಶ ಸ್ವಾಮಿ ವಂದಿಸಿದರು. ‘ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚುರಿ’ ಖಾತೆ ಮೂಲಕ ಫೇಸ್‍ಬುಕ್‍ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.