ADVERTISEMENT

ಬೀದರ್‌: ₹14 ಕೋಟಿ ತೆರಿಗೆ ಬಾಕಿ; ಮಳಿಗೆಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 15:52 IST
Last Updated 14 ಅಕ್ಟೋಬರ್ 2023, 15:52 IST
ನಗರಸಭೆ ಪೌರಾಯುಕ್ತ ಶಿವರಾಜ್‌ ರಾಠೋಡ್‌ ಅವರು ಬೀದರ್‌ನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳ ಮಾಲೀಕರೆದುರು ಮಳಿಗೆಗೆ ಬೀಗ ಜಡಿದರು
ನಗರಸಭೆ ಪೌರಾಯುಕ್ತ ಶಿವರಾಜ್‌ ರಾಠೋಡ್‌ ಅವರು ಬೀದರ್‌ನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳ ಮಾಲೀಕರೆದುರು ಮಳಿಗೆಗೆ ಬೀಗ ಜಡಿದರು   

ಬೀದರ್‌: ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ನಗರಸಭೆ ಅಧಿಕಾರಿಗಳು ನಗರದಲ್ಲಿ ಹತ್ತು ಮಳಿಗೆಗಳಿಗೆ ಬೀಗ ಹಾಕಿದ್ದಾರೆ.

ನಗರಸಭೆ ಪೌರಾಯುಕ್ತ ಶಿವರಾಜ್‌ ರಾಠೋಡ್‌ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹೊಸ ಬಸ್‌ ನಿಲ್ದಾಣ ರಸ್ತೆಯಲ್ಲಿನ ಬಟ್ಟೆ, ಎಲೆಕ್ಟ್ರಾನಿಕ್‌ ಸೇರಿದಂತೆ ಒಟ್ಟು ಹತ್ತು ಮಳಿಗೆಗಳಿಗೆ ಶುಕ್ರವಾರ ಬೀಗ ಹಾಕಿಸಿದ್ದಾರೆ.

ನಗರದ ವಿವಿಧ ವಾಣಿಜ್ಯ ಮಳಿಗೆಗಳು ಒಟ್ಟು ₹14 ಕೋಟಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. 300ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಮೊದಲ ಹಂತದಲ್ಲಿ ಹತ್ತು ಮಳಿಗೆಗಳಿಗೆ ಬೀಗ ಜಡಿದಿದ್ದಾರೆ.

ADVERTISEMENT

ತೆರಿಗೆ ಪಾವತಿಸುವ ಸಂಬಂಧ ಮಳಿಗೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಮಾಲೀಕರು ತೆರಿಗೆ ಕಟ್ಟಿರಲಿಲ್ಲ. ಹೀಗಾಗಿ ಖುದ್ದು ಸಿಬ್ಬಂದಿ ವರ್ಗದವರೊಂದಿಗೆ ಸ್ಥಳಕ್ಕೆ ಬಂದು ಬೀಗ ಹಾಕಿಸಿದ್ದಾರೆ. ತೆರಿಗೆ ಪಾವತಿಸುವುದಾಗಿ ಕೆಲವರು ಮೌಖಿಕವಾಗಿ ಹೇಳಿದರು. ಆದರೆ, ಅದಕ್ಕೊಪ್ಪದ ಪೌರಾಯುಕ್ತರು, ಪಾವತಿಸಿದ ರಸೀದಿ ತೋರಿಸಿದ ನಂತರವೇ ಮಳಿಗೆಗಳ ಬೀಗ ಹಿಂತಿರುಗಿಸಲಾಗುವುದು ಎಂದು ಹೇಳಿ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.