ಬೀದರ್: ಕರ್ನಾಟಕದ ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರ ನೇಮಕಾತಿ ಹಾಗೂ ವೃಂದ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡಬೇಕೆಂದು ಬೀದರ್ ಜಿಲ್ಲಾ ಶಿಕ್ಷಕರ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ.
2024ರ ಸೆಪ್ಟೆಂಬರ್ 4ರಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಒಂದು ಸಮಿತಿಯನ್ನು ರಚಿಸಿ 30 ದಿನಗಳಲ್ಲಿ ವರದಿ ಪಡೆದು ಶಿಕ್ಷಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ, ಇದುವರೆಗೆ ಭರವಸೆ ಈಡೇರಿಸಿಲ್ಲ ಎಂದಿದ್ದಾರೆ.
ಈಗಾಗಲೇ ಕಾನೂನು ಇಲಾಖೆ ಎರಡು ಬಾರಿ ಅಭಿಪ್ರಾಯ ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ನೀಡಿದೆ. ಆರ್ಥಿಕ ಇಲಾಖೆ ತನ್ನ ಅಭಿಪ್ರಾಯ ನೀಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕರ ಸಂಘದ ಪ್ರತಿನಿಧಿಗಳು, ಎಲ್ಲಾ ಸಂಬಂಧಿತ ಇಲಾಖೆಗಳ ಅಭಿಪ್ರಾಯಗಳನ್ನು ಪಡೆದು, ಆ. 25ರೊಳಗೆ ಸಂಪುಟ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಔರಾದ್ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಮುರುಗೇಂದ್ರ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣಾ, ಬೀದರ್ ತಾಲ್ಲೂಕು ಅಧ್ಯಕ್ಷ ರಾಜು ಸಾಗರ, ರಾಜೆಪ್ಪ ಜಮಾದಾರ, ಸೂರ್ಯಕಾಂತ ಸೂಂಟೆ, ರಾಜಪ್ಪ ನಂದೋಡೆ, ಬಸವರಾಜ ಪಾಟೀಲ್, ಅಬ್ದುಲ್ ಸತ್ತಾರ್, ಪಂಢರಿ ಆಡೆ, ಸುಮತಿ, ಚಲುವಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.