ADVERTISEMENT

ಚುನಾವಣೆ ಶಾಖೆಯಲ್ಲಿ ಸಲಹಾ ಕೇಂದ್ರ ಸ್ಥಾಪನೆ

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:50 IST
Last Updated 10 ಅಕ್ಟೋಬರ್ 2025, 7:50 IST
ಶಿಲ್ಪಾ ಶರ್ಮಾ
ಶಿಲ್ಪಾ ಶರ್ಮಾ   

ಬೀದರ್‌: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಅಧಿಕಾರದ ಅವಧಿ ನವೆಂಬರ್‌ 11ರಂದು ಕೊನೆಗೊಳ್ಳಲಿದ್ದು, 2026ರಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ದೂರು ಹಾಗೂ ಮತದಾರರ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಆಯಾ ತಾಲ್ಲೂಕು ಕೇಂದ್ರಗಳ ಚುನಾವಣೆ ಶಾಖೆಯಲ್ಲಿ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.

ಈ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ: 08482-226290 ಇದೆ. ಸಾರ್ವಜನಿಕರು ಈ ಸಲಹಾ ಕೇಂದ್ರ ತಂಡಕ್ಕೆ ಸಂಪರ್ಕಿಸಿ ಮತದಾರರ ನೋಂದಣಿ ಮತ್ತು ಚುನಾವಣೆಗೆ ಕುರಿತಾದ ಮಾಹಿತಿ ಪಡೆಯಬಹುದು. ಯಾವುದೇ ದೂರುಗಳಿದ್ದಲ್ಲಿ ದಾಖಲಿಸಬಹುದು ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025ರ ನವೆಂಬರ್‌ 1ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ವೇಳಾಪಟ್ಟಿ ಹೊರಡಿಸಲಾಗಿದೆ. ಅದರನ್ವಯ ನವೆಂಬರ್‌ 25ರಂದು ಕರಡು ಮತದಾರರ ಪಟ್ಟಿ ಪ್ರಚುರಪಡಿಸಿ ನ. 25ರಿಂದ ಡಿ. 10ರ ವರೆಗೆ ಆಕ್ಷೇಪಣೆ ಆಹ್ವಾನಿಸಿ, ಡಿ. 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಯಾವುದೇ ಒಂದು ಚುನಾವಣೆ ಪಾರದರ್ಶಕ, ನ್ಯಾಯಸಮ್ಮತ, ಯಾವುದೇ ಅಹಿತಕರ ಘಟನೆಗಳು ಜರುಗದೇ ಶಾಂತಿಯುತವಾಗಿ ಮುಕ್ತಾಯಗೊಳ್ಳಬೇಕಾದಲ್ಲಿ ಪ್ರಪ್ರಥಮವಾಗಿ ದೋಷರಹಿತವಾದಂತಹ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಆಯೋಗ ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. 

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿರುವುದರಿಂದ ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಮಾಹಿತಿ ಕೋರಿದ್ದಲ್ಲಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಬೇಕು. ಈಗಾಗಲೇ ನೋಂದಣಿಯಾಗಿದ್ದಲ್ಲಿ ಅವರ ಮತದಾರರ ಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿ ನೀಡಬೇಕು. ಮತದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭದಿಂದ ಈ ಚುನಾವಣೆಯ ಫಲಿತಾಂಶ ಘೋಷಣೆಯಾಗುವವರೆಗೆ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮೂಲಕ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸಲಹಾ ಕೇಂದ್ರವು ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತ/ಮೌಖಿಕ/ದೂರವಾಣಿ ಮೂಲಕ ಸ್ವೀಕೃತವಾಗುವಂತಹ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾತಿ ಆಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಬೇಕು. ಮತದಾರರ ನೋಂದಣಿ ಹಾಗೂ ಚುನಾವಣೆ ಕುರಿತಾದ ಮಾಹಿತಿ ಹಾಗೂ ದೂರನ್ನು ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.