ಹುಮನಾಬಾದ್: ತಾಲ್ಲೂಕಿನ ಬೋತಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವ ಕಾರಣ ಕಳೆದ ಎರಡು ವರ್ಷಗಳಿಂದ ಇಲ್ಲಿನ ಶಾಲಾ ಮಕ್ಕಳಿಗೆ ಪಾಠ ಪ್ರವಚನ ದೇವಸ್ಥಾನದಲ್ಲಿ ನಡೆಯುತ್ತಿದೆ.
ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದ್ದು, 16 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಶಾಲೆಯಲ್ಲಿ ಒಬ್ಬರು ಮುಖ್ಯಶಿಕ್ಷಕ ಹಾಗೂ ಒಬ್ಬರು ಸಹ ಶಿಕ್ಷಕ ಇದ್ದಾರೆ.
ಶಾಲೆಯ ಒಂದು ಕೊಠಡಿಯ ಸಿಮೆಂಟ್, ಕಬ್ಬಿಣದ ಸಲಾಕೆಗಳು ಕಳಚಿ ಬೀಳುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಮಾಡಿದ್ದಾರೆ.
ಶಾಲೆಯಲ್ಲಿ ಎರಡು ಕೊಠಡಿಗಳಿದ್ದು, ಕಟ್ಟಡ ಶಿಥಿಲಗೊಂಡು ಹಲವು ವರ್ಷಗಳೇ ಕಳೆದಿವೆ. ಶಾಲೆಗೆ ಕೌಂಪೌಡ್ ಕೂಡ ಸಂಪೂರ್ಣ ಹಾಳಾಗಿದೆ. ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲ.
ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯಿಂದ ಶಿಕ್ಷಣ ಇಲಾಖೆಗೆ, ಜಿಲ್ಲಾಧಿಕಾರಿಗೆ ಶಾಲೆ ಕಟ್ಟಡ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಚೆಗೆ ಶಾಸಕರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಶಾಲೆಯನ್ನು ಸಂಪೂರ್ಣ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮನೆ ಮುಂದೆಯೇ ಚರಂಡಿ ನೀರು:
ಬೋತಗಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಸ್ವಚ್ಛತೆಯ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮದಲ್ಲಿ ಈವರೆಗೂ ಸೂಕ್ತ ಚರಂಡಿ ನಿರ್ಮಾಣ ಆಗಿಲ್ಲ. ಚರಂಡಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿದು, ಅಲ್ಲಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ. ಸೊಳ್ಳೆಗಳಿಂದಾಗಿ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶೀಘ್ರದಲ್ಲೇ ಚರಂಡಿಗಳಲ್ಲಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ಬಹುತೇಕರು ಸ್ವಚ್ಛಗ್ರಾಮ ಯೋಜನೆ ಅಡಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೂ ಅವುಗಳನ್ನು ಬಳಸದೇ ಬಯಲು ಬಹಿರ್ದೆಸೆಗೆ ತೆರಳುತ್ತಾರೆ. ಹೀಗಾಗಿ ಶೌಚಾಲಯ ಬಳಕೆ ಕುರಿತು ಜಾಗೃತಿ ಹಾಗೂ ಅರಿವು ಮೂಡಿಸಬೇಕು ಎಂದು ಖಲೀಲ್ ಒತ್ತಾಯಿಸಿದ್ದಾರೆ.
‘ಚರಂಡಿ ಸ್ವಚ್ಛತೆ ಮಾಡಿಸಲಾಗುವುದು. ಶೌಚಾಲಯ ಬಳಕೆಯ ಕುರಿತು ಗ್ರಾಮದಲ್ಲಿ ಅರಿವು ಮೂಡಿಸಲಾಗುವುದು’ ಎಂದು ಪಿಡಿಒ ರಮೇಶ ತಿಳಿಸಿದರು.
ಶಾಲಾ ಕಟ್ಟಡ ದುರಸ್ತಿ ಆಗಬೇಕಿರುವುದರಿಂದ ಶಾಲೆಯ ಪಕ್ಕದಲ್ಲೇ ಇರುವ ಲಕ್ಷ್ಮಿ ದೇವಸ್ಥಾನದಲ್ಲಿ ತರಗತಿ ನಡೆಯುತ್ತಿವೆ. ಶಾಲೆಯ ಕಟ್ಟಡ ನಿರ್ಮಾಣ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. -ವೆಂಕಟೇಶ್ ಗೂಡಾಳ್ ಕ್ಷೇತ್ರ ಶಿಕ್ಷಣಾಧಿಕಾರಿ ಹುಮನಾಬಾದ್.
ಕಳೆದ ಎರಡು ವರ್ಷಗಳಿಂದ ದೇವಸ್ಥಾನದಲ್ಲಿ ಶಾಲೆ ನಡೆಯುತ್ತಿದೆ. ಇಲ್ಲಿ ಮೂಲ ಸೌಕರ್ಯಗಳಿಲ್ಲ. ಸಂಬಂಧಪಟ್ಟವರು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮದ ಹೈಮಾಸ್ಟ್ ದೀಪ ಬಂದ್ ಆಗಿದೆ. ಅದನ್ನು ದುರಸ್ತಿ ಮಾಡಬೇಕು.
-ನೀಲಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬೋತಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.