ADVERTISEMENT

ಮಾನಸಿಕ ಒತ್ತಡ ರೋಗಗಳಿಗೆ ಕಾರಣ: ಶ್ವೇತಾ ಬಿರಾದಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 13:52 IST
Last Updated 12 ಅಕ್ಟೋಬರ್ 2020, 13:52 IST
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಿದ್ರಾಮ ಟಿ.ಪಿ ಉದ್ಘಾಟಿಸಿದರು
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಿದ್ರಾಮ ಟಿ.ಪಿ ಉದ್ಘಾಟಿಸಿದರು   

ಬೀದರ್: ‘ಮಾನಸಿಕ ದೌರ್ಬಲ್ಯ ಹಾಗೂ ಒತ್ತಡದ ಜೀವನ ಹಲವು ರೋಗಗಳಿಗೆ ಕಾರಣವಾಗುತ್ತಿದೆ’ ಎಂದು ಬ್ರಿಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದ ಮುಖ್ಯಸ್ಥೆ ಶ್ವೇತಾ ಬಿರಾದಾರ ಹೇಳಿದರು.

ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೇ 80 ರಷ್ಟು ಜನರಿಗೆ ಆಲೋಚನೆಗಳಿಂದಲೇ ರೋಗ ಬರುತ್ತದೆ. ಜ್ಞಾನಕ್ಕೆ ಸಂಬಂಧಿಸಿದ ಎಲ್ಲವೂ ಮನಸ್ಸಿಗೆ ಸಂಬಂಧಿಸಿರುತ್ತದೆ. ಮನಸ್ಸು ಕಲುಷಿತಗೊಂಡರೆ ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದರು.

ADVERTISEMENT

‘ಉತ್ತಮ ವಾತಾವರಣದಿಂದ ಮಾನಸಿಕ ಆರೋಗ್ಯ ವೃದ್ಧಿಸಲು ಸಾಧ್ಯವಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ಅಭಿಪ್ರಾಯಪಟ್ಟರು.

‘ಇಂದು ಹಲವು ಕಾರಣಗಳಿಂದಾಗಿ ಯುವ ಜನಾಂಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಆತ್ಮಹತ್ಯೆಯಂತಹ ಕೃತ್ಯಗಳಿಗೂ ಇಳಿಯುತ್ತಿದೆ. ಮಾನಸಿಕ ಸ್ವಾಸ್ಥ್ಯ ಹಾಗೂ ಆತ್ಮಹತ್ಯೆ ತಡೆಗೆ ಜಾಗೃತಿ ಮೂಡಿಸುವಂತೆ ಸುಪ್ರೀಂ ಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಿದೆ’ ಎಂದು ತಿಳಿಸಿದರು.

‘ಮಾನಸಿಕ ರೋಗಿಗಳನ್ನು ನೋಡಿ ಗೇಲಿ ಮಾಡುವುದು ಸರಿಯಲ್ಲ. ಅವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಕಾನೂನು ಅನ್ವಯ ಅವರಿಗೆ ರಕ್ಷಣೆ ಒದಗಿಸಲು ಮುಂದಾಗಬೇಕು’ ಎಂದು ಹೇಳಿದರು.

ಮನೋರೋಗ ತಜ್ಞ ಡಾ.ಅಭಿಜೀತ ಪಾಟೀಲ ಮಾತನಾಡಿ, ‘ಭಾರತ, ವಿಶ್ವದಲ್ಲೇ ಅತಿ ಹೆಚ್ಚು ಯುವ ಜನತೆ ಇರುವ ದೇಶವಾಗಿದೆ. ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಆದರೆ, ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ’ ಎಂದರು.

‘ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ಯ, ಮಾದಕ ವಸ್ತುಗಳ ಸೇವನೆ, ಮನೋದೈಹಿಕ ಬೇನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಭಯ ಹುಟ್ಟಿಸುತ್ತಿವೆ’ ಎಂದು ತಿಳಿಸಿದರು.

‘ಕೆಲ ಪಾಲಕರು ಅಧಿಕ ಅಂಕ ಗಳಿಕೆಗೆ ಒತ್ತಡ ಹೇರುತ್ತಿರುವ ಕಾರಣ ಮಕ್ಕಳು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಪಾಟೀಲ ತಿಳಿಸಿದರು.

ಶಂಕರೆಪ್ಪ ಜಕಟ್ಟಿ, ಸಂಜು ಮಲಗಿಕರ್, ಪರಶುರಾಮ, ರಮೇಶ, ಇಮ್ಯಾನುವೆಲ್, ಗೋರಕನಾಥ, ಜ್ಯೋತಿ, ರೇಣುಕಾ, ಭ್ರಮರಾಂಬ ದೇವಿ, ಶ್ಯಾಮರಾವ್, ಅಬ್ದುಲ್ ಹೈ, ಅಫಜಲೊದ್ದಿನ್, ವಿದ್ಯಾಸಾಗರ, ಪ್ರಮೋದ್ ರಾಠೋಡ್, ಸಂಗಮೇಶ, ಅಂಬಾದಾಸ ಇದ್ದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದ ಮೇಲ್ವಿಚಾರಕ ವೀರಶೆಟ್ಟಿ ಚನಶೆಟ್ಟಿ ನಿರೂಪಿಸಿದರು. ಸೀಮಪ್ಪ ಸರಕುರೆ ಸ್ವಾಗತಿಸಿದರು. ರಾಜೇಶ ವಂದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.