ADVERTISEMENT

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಉಪನ್ಯಾಸಕ ವಿಜಯಕುಮಾರ ಪಾಂಚಾಳ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 12:03 IST
Last Updated 13 ಜನವರಿ 2021, 12:03 IST
ಬೀದರ್‌ನ ಘೋಡಂಪಳ್ಳಿಯ ಅಟಲಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಬಿ.ವಿ.ಭೂಮರೆಡ್ಡಿ ಕಾಲೇಜಿನ ಉಪನ್ಯಾಸಕ ವಿಜಯಕುಮಾರ ಪಾಂಚಾಳ ಉದ್ಘಾಟಿಸಿದರು
ಬೀದರ್‌ನ ಘೋಡಂಪಳ್ಳಿಯ ಅಟಲಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಬಿ.ವಿ.ಭೂಮರೆಡ್ಡಿ ಕಾಲೇಜಿನ ಉಪನ್ಯಾಸಕ ವಿಜಯಕುಮಾರ ಪಾಂಚಾಳ ಉದ್ಘಾಟಿಸಿದರು   

ಬೀದರ್: ‘ಡಾ.ಬಿ.ಆರ್‌.ಅಂಬೇಡ್ಕರ್ ಅವರು ಸಮಾನತೆಯ ಸಮಾಜ ಕಟ್ಟಲು ಅನುಕೂಲವಾಗುವಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಮಾಡಿ ವಿಶ್ವಕ್ಕೆ ಮಾದರಿಯಾದ ಸಂವಿಧಾನ ಬರೆದರು. ನಮ್ಮ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ’ ಎಂದು ಬಿ.ವಿ.ಭೂಮರೆಡ್ಡಿ ಕಾಲೇಜಿನ ಉಪನ್ಯಾಸಕ ವಿಜಯಕುಮಾರ ಪಾಂಚಾಳ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಘೋಡಂಪಳ್ಳಿಯ ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೋಷಿತ ಸಮುದಾಯದಿಂದ ಬಂದರೂ ಛಲಬಿಡದೆ ಶಿಕ್ಷಣ ಪಡೆದರು. ಅಸ್ಪೃಷ್ಯತೆಯಿಂದಾಗಿ ಅವಮಾನ ಅನುಭವಿಸಿದರೂ ಕಲಿಕೆಯನ್ನು ಕೈಬಿಡಲಿಲ್ಲ. ಸತತ ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಅನೇಕ ವಿಶ್ವವಿದ್ಯಾಲಯಗಳ ಹಲವು ಪದವಿಗಳನ್ನು ಪಡೆದರು. ಶಿಕ್ಷಣದಿಂದೇ ಒಂದು ಸಮಾಜ ಪ್ರಗತಿ ಸಾಧಿಸಲು ಸಾಧ್ಯವೆಂದು ಪ್ರತಿಪಾದಿಸಿದರು’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ, ಬದುಕು ಹಾಗೂ ಬರಹದ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಬಿರಾದಾರ ಮಾತನಾಡಿ, ’ಡಾ.ಅಂಬೇಡ್ಕರ್‌ ಅವರು ದೇವಸ್ಥಾನ ಕಟ್ಟುವ ಬದಲು ಗ್ರಂಥಾಲಯಗಳನ್ನು ನಿರ್ಮಿಸಿ ಎಂದು ಹೇಳಿದ್ದರು’ ಎಂದರು.

‘ದೇವಸ್ಥಾನಗಳಲ್ಲಿ ಭಕ್ತರು, ಭಿಕ್ಷಕರು ಹಾಗೂ ಸಾರ್ವಜನಿಕರು ಕೂತುಕೊಳ್ಳುತ್ತಾರೆ. ಆದರೆ, ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಿಸಿದರೆ ಜ್ಞಾನಿಗಳು ಕುಳಿತುಕೊಳ್ಳುತ್ತಾರೆ ಮನವರಿಕೆ ಮಾಡಿದ್ದರು’ ಎಂದು ತಿಳಿಸಿದರು.

ಸಂಗೀತ ಕಲಾವಿದರಾದ ಶಿವಕುಮಾರ ಪಾಂಚಾಳ, ದೇವಿದಾಸ ಜೋಶಿ, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಎಂ.ಪಿ.ಮುದಾಳೆ ಇದ್ದರು. ರೋಶನಿ ಹಾಗೂ ಪೂಜಾ ಗಾಯನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.