ADVERTISEMENT

ಹುಲಸೂರು: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಕಾರುಬಾರು!

ಹುಲಸೂರು: ಸಾರ್ವಜನಿಕರಿಗೆ ಅಪಘಾತ ಭೀತಿ, ಮಳೆಗಾಲಕ್ಕಿಲ್ಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 5:03 IST
Last Updated 19 ಜುಲೈ 2024, 5:03 IST
ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಗುಂಡಿ ಬಿದ್ದಿರುವುದು
ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಗುಂಡಿ ಬಿದ್ದಿರುವುದು   

ಹುಲಸೂರು: ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ಒಂದೆರಡು ತಿಂಗಳ ಮೊದಲು ಅಲ್ಲಲ್ಲಿ ಪ್ಯಾಚ್‌ವರ್ಕ್ ನಡೆಸಿದ ಜಾಗದಲ್ಲಿಯೇ ಉದ್ದಕ್ಕೂ ಪುನಃ ಗುಂಡಿಗಳು ಕಾಣಿಸಿಕೊಂಡಿವೆ. ಈಗಾಗಲೇ ದ್ವಿಚಕ್ರ ವಾಹನಗಳಲ್ಲದೆ, ಆಟೊ, ಕಾರು ವಾಹನಗಳು ಹೊಂಡದಲ್ಲಿ ಬಿದ್ದು ಹರಸಾಹಸ ಪಟ್ಟು ಪ್ರಯಾಣ ಮಾಡಬೇಕಿದೆ.

ಪಟ್ಟಣ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು ವ್ಯಾಪಾರ, ವಹಿವಾಟು ಹೆಚ್ಚುತ್ತಿದೆ. ಜನಸಂಖ್ಯೆಯೂ ಬೆಳೆಯುತ್ತಿದೆ. ಗಡಿಭಾಗಕ್ಕೆ ಸಮೀಪದಲ್ಲಿರುವುದರಿಂದ ಬರುವ ವಾಹನಗಳ ಸಂಖ್ಯೆಯೂ ಅಧಿಕವಾಗಿದ್ದು ಮುಖ್ಯರಸ್ತೆಯಲ್ಲಿ ಒಂದು ಅಡಿ ಆಳದಷ್ಟು ಗುಂಡಿಗಳು ಬಿದ್ದಿದ್ದು, ಅದರಲ್ಲಿಯೇ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ.

ಮುಖ್ಯ ರಸ್ತೆ ಯಾವಾಗಲೂ ಜನಸಂದಣಿ ಇರುತ್ತದೆ. ಸಮೀಪದಲ್ಲೇ ಶಾಲೆ ಮತ್ತು ವಿದ್ಯಾ- ಸಂಸ್ಥೆಗಳಿವೆ. ವಿದ್ಯಾರ್ಥಿಗಳು ಶಾಲೆಗಳಿಗೆ ಇದೇ ಮಾರ್ಗದಲ್ಲಿ ಬಂದು ಹೋಗಬೇಕು. ಗುಂಡಿಗಳನ್ನು ತಪ್ಪಿಸುವ ಉದ್ದೇಶದಿಂದ ವಾಹನ ಸವಾರರು ರಸ್ತೆಯ ಪಕ್ಕಕ್ಕೆ ಚಲಿಸುವುದರಿಂದ, ರಸ್ತೆ ಬದಿಯಲ್ಲಿ ಬಸ್‌ಗಳಿಗಾಗಿ ಕಾಯುವ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಜೀವಭಯದಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಒಂದು ಸಣ್ಣ ಮಳೆಯಾದರೂ ಗುಂಡಿಗಳು ತುಂಬುತ್ತವೆ. ರಾತ್ರಿ ವೇಳೆ ಮಳೆಬಂದರೆ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ಸಹಿತ, ಸಣ್ಣ ವಾಹನಗಳು ಮುಳುಗಿ ಏಳುವ ಭರದಲ್ಲಿ ಸಂಚಾರ ಮಾಡುವಾಗ ಅನೇಕ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪಾದಚಾರಿಗಳಿಗೆ ನಿತ್ಯವೂ ಕೆಸರಿನ ಅಭಿಷೇಕವಾಗುತ್ತಿದೆ.

ಕೂಡಲೇ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ರಸ್ತೆ ಇಕ್ಕೆಲಗಳಲ್ಲಿ ಹಬ್ಬಿದ ಗಿಡ; ಸಂಚಾರಕ್ಕೆ ತೊಂದರೆ: ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಗಿಡ ಹಾಗೂ ಬಳ್ಳಿಗಳು ಬೆಳೆದಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು ರಸ್ತೆಯ ತಿರುವು ಕಾಣದೆ ಎದುರು ಬರುವ ವಾಹನಗಳು ಕಾಣದಂತಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿ ಬೆಳೆದು ನಿಂತ ಕಾರಣ ಜೀವ ಕೈಯಲ್ಲಿ ಹಿಡಿದು ಸಂಚಾರಿಸಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಪೊದೆ ಹಾಗೂ ಗಿಡ ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆಯ ಗಡಿಗೌಡಗಾಂವ ಗ್ರಾಮಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮುಳ್ಳು ಕಂಟಿ ಬೆಳೆದಿರುವುದು
ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಗುಂಡಿ ಬಿದ್ದಿರುವುದು
ವಾಹನಗಳ ಓಡಾಟದ ರಭಸಕ್ಕೆ ಗುಂಡಿಗಳಲ್ಲಿರುವ ಜಲ್ಲಿಕಲ್ಲುಗಳು ಜನರ ಮೇಲೆ ಬಂದು ಬೀಳುತ್ತಿವೆ. ಇದರಿಂದ ಅಮಾಯಕರಿಗೆ ತೀವ್ರ ಸ್ವರೂಪದ ಗಾಯಗಳಾಗುವ ಸಂಭವವಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ನಾಗೇಶ್ ಮೇತ್ರೆ ಗ್ರಾ.ಪಂ. ಸದಸ್ಯ
ತಾಲ್ಲೂಕಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸರಿಯಾಗಿಲ್ಲ. ಭಾರಿ ವಾಹನಗಳ ಓಡಾಟದ ಭಾರವೂ ಆಗುತ್ತಿದ್ದು ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.
ಆಕಾಶ ಖಂಡಾಳೆ ಸಾಮಾಜಿಕ ಕಾರ್ಯಕರ್ತ
ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆದ ಅನಾಹುತವನ್ನು ಎಲ್ಲರೂ ನೋಡಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ರಸ್ತೆಯ ಗುಂಡಿಗಳನ್ನಾದರೂ ಮುಚ್ಚುವ ಕೆಲಸ ತುರ್ತಾಗಿ ಆಗಬೇಕು.
ಪ್ರವೀಣ್ ಕಾಡಾದಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ
ಗ್ರಾಮೀಣ ಭಾಗದ ಕೆಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ತಿಳಿಸಲಾಗುವುದು. 2-3 ದಿನದಲ್ಲಿ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಧನರಾಜ ಚವ್ಹಾಣ್ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.