ADVERTISEMENT

ಮಾರುಕಟ್ಟೆಯಲ್ಲಿ ಇಳಿದ ತರಕಾರಿ ಬೆಲೆ

ಹೆಚ್ಚಿದ ತರಕಾರಿ ರಾಜ ಬದನೆಕಾಯಿ ಘನತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 13:25 IST
Last Updated 15 ಜನವರಿ 2022, 13:25 IST
ಚಂದ್ರಕಾಂತ ಮಸಾನಿ
ಚಂದ್ರಕಾಂತ ಮಸಾನಿ   

ಬೀದರ್: ಮಕರ ಸಂಕ್ರಾಂತಿಗೆ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಹಬ್ಬದ ವೇಳೆ ಇಲ್ಲಿಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿರುವ ತರಕಾರಿ ರಾಜ ಬದನೆಕಾಯಿ ಹಾಗೂ ಹಿರೇಕಾಯಿ ಮಾತ್ರ ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ಉಳಿದ ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ರೈತರು ಹಾಗೂ ಭೂಮಾಲೀಕರು ಬದನೆಕಾಯಿ ಹಾಗೂ ಹಿರೇಕಾಯಿ ಪಲ್ಯ, ರೊಟ್ಟಿ ಮಾಡಿಕೊಂಡು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಭೋಜನ ಮಾಡುವುದು ಸಂಪ್ರದಾಯ. ಬದನೆಕಾಯಿ ಇಲ್ಲದಿದ್ದರೆ ತೋಟದ ಊಟ ಅಪೂರ್ಣ ಎಂದೇ ಹೇಳಲಾಗುತ್ತದೆ. ಹೀಗಾಗಿ ಶುಕ್ರವಾರ ಬದನೆಕಾಯಿ ಭರ್ಜರಿ ಮಾರಾಟವಾಗಿದೆ.

ಜಿಲ್ಲೆಯಲ್ಲಿ ಬಹುತೇಕರು ಶುಕ್ರವಾರ ಹಬ್ಬ ಆಚರಣೆ ಮಾಡಿದದರೆ, ಕೆಲವರು ಶನಿವಾರ ಆಚರಿಸಿದರು. ಕೆಲ ಕಡೆ ಪುರುಷರು ಹೊಲಗಳಲ್ಲಿ ಬಾಡೂಟದ ವ್ಯವಸ್ಥೆ ಮಾಡಿಕೊಂಡಿದ್ದರು.

ADVERTISEMENT

ಸುಗ್ಗಿ ಇಲ್ಲದ ಕಾರಣ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರುವ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹100 ರಿಂದ ₹120ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ನುಗ್ಗೆಕಾಯಿ ಬೆಲೆ ಕೆಜಿಗೆ ₹200 ಇತ್ತು. ಬದನೆಕಾಯಿ ಅಬ್ಬರಕ್ಕೆ ನುಗ್ಗೆಕಾಯಿ ಮುದುಡಿಕೊಂಡಿದೆ. ಡೊಣ ಮೆಣಸಿನಕಾಯಿ ಬೆಲೆಯೂ ಕೆ.ಜಿಗೆ ₹ 100 ಹೆಚ್ಚಾಗಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.

ಬೆಳ್ಳುಳ್ಳಿ ಬೆಲೆ ಪ್ರತಿಕ್ವಿಂಟಲ್‌ಗೆ ₹ 3 ಸಾವಿರದಿಂದ ₹4 ಸಾವಿರಕ್ಕೆ ಹೆಚ್ಚಿದೆ. ಗಜ್ಜರಿ, ಬೀನ್ಸ್ ಬೆಲೆಯಲ್ಲಿ ₹ 1 ಸಾವಿರ ಹೆಚ್ಚಳವಾಗಿದೆ. ಹಿರೇಕಾಯಿ, ಹೂಕೋಸು ₹ 2 ಸಾವಿರ ಏರಿಕೆಯಾಗಿದ್ದು. ಬೆಲೆ ಏರಿಸಿಕೊಂಡ ಬೀಟ್‌ರೂಟ್‌ ಮತ್ತಷ್ಟು ಕೆಂಪಗಾಗಿದೆ.

ಹಸಿ ಮೆಣಸಿನಕಾಯಿ, ಆಲೂಗಡ್ಡೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹಾಗೂ ಕರಿಬೇವು ₹ 2 ಸಾವಿರ ಕಡಿಮೆಯಾಗಿದೆ. ಬೆಲೆಗಳ ಅಬ್ಬರದಲ್ಲಿ ಬೆಂಡೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರಕ್ಕೆ ಇಳಿದು ಮೆತ್ತಗಾಗಿದೆ.
ಈರುಳ್ಳಿ, ಬದನೆಕಾಯಿ, ಚವಳೆಕಾಯಿ, ಮೆಂತೆ ಸೊಪ್ಪು, ಎಲೆಕೋಸು, ಸಬ್ಬಸಗಿ, ತೊಂಡೆಕಾಯಿ, ಕೊತಂಬರಿ, ಟೊಮೆಟೊ ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬದನೆಕಾಯಿ ಹಾಗೂ ಹಿರೇಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ. ಹಬ್ಬದ ಸಂದರ್ಭದಲ್ಲಿ ರೈತರಿಗೆ ಉತ್ತಮ ಲಾಭವೂ ಆಗಿದೆ. ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನ ಹಳ್ಳಿಗಳಿಂದ ಹೂಕೋಸು, ಎಲೆಕೋಸು, ಪಾಲಕ್ ಹಾಗೂ ಕರಿಬೇವು ಬಂದಿದೆ.

ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಹಿರೇಕಾಯಿ, ಚವಳೆಕಾಯಿ, ಗಜ್ಜರಿ, ಬೀಟ್‌ರೂಟ್‌, ಆಲೂಗಡ್ಡೆ, ಬೆಂಡೆಕಾಯಿ, ಬೆಳಗಾವಿಯಿಂದ ಮೆಣಸಿನಕಾಯಿ ಮತ್ತು ತುಮಕೂರಿನಿಂದ ಟೊಮೆಟೊ ಆವಕವಾಗಿದೆ.

‘ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿ ಬೆಲೆ ಸ್ಥಿರವಾಗಿದೆ. ಇನ್ನೊಂದು ವಾರ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದು ತರಕಾರಿ ವ್ಯಾಪಾರಿ ಶಿವಾನಂದ ಮಾಡಗೂಳ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.