ADVERTISEMENT

ಶರಣ ಸಾಹಿತ್ಯದಲ್ಲಿವೆ ಕ್ರಾಂತಿಕಾರಿ ಅಂಶಗಳು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 15:39 IST
Last Updated 5 ಜನವರಿ 2021, 15:39 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ‘ಶಿಕ್ಷಣ ಪ್ರೇಮಿ ಅಬ್ದುಲ್ ಖದೀರ್’ ಪುಸ್ತಕ ಬಿಡುಗಡೆ ಮಾಡಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ‘ಶಿಕ್ಷಣ ಪ್ರೇಮಿ ಅಬ್ದುಲ್ ಖದೀರ್’ ಪುಸ್ತಕ ಬಿಡುಗಡೆ ಮಾಡಿದರು   

ಬೀದರ್: ‘ಈವರೆಗೆ ಶರಣರ 22 ಸಾವಿರ ವಚನಗಳು ದೊರಕಿವೆ. ಶರಣ ಸಾಹಿತ್ಯದಲ್ಲಿ ಕ್ರಾಂತಿಕಾರಿ ಅಂಶಗಳು ಇವೆ.
ಶರಣ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವ್ಯಕ್ತಿ ಕ್ರಾಂತಿಕಾರಿ ಹೆಜ್ಜೆ ಇಡದೆ ಇರಲಾರ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅಭಿಪ್ರಾಯಪಟ್ಟರು.

ಡಾ.ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ನೀಟ್‌ನಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ, ವೈದ್ಯಕೀಯ ಪ್ರವೇಶಕ್ಕೆ ಉಚಿತವಾಗಿ ಆಯ್ಕೆಯಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಲೇಖಕಿ ಕಸ್ತೂರಿ ಪಟಪಳ್ಳಿ ಬರೆದ ‘ಶಿಕ್ಷಣ ಪ್ರೇಮಿ ಅಬ್ದುಲ್ ಖದೀರ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಲ್ಯಾಣದ ಮಣ್ಣು, ವಿಭೂತಿ ಹಾಗೂ ಗಂಧದ ಸಮಾನ. ಈ ನೆಲೆದಲ್ಲಿ ಬೆಳೆದ ವ್ಯಕ್ತಿ ಸರ್ವಧರ್ಮವನ್ನು ಪ್ರೀತಿಸುವ ವ್ಯಕ್ತಿಯಾಗಬೇಕು. ಜಿಲ್ಲೆಯ ಜನ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತನಾಗಿದ್ದಾಗ ಗಡಿ ಭಾಗದಲ್ಲಿ ಹೆಚ್ಚು ಹೆಚ್ಚು ಕನ್ನಡದ ಕಾರ್ಯಕ್ರಮಗಳು ನಡೆಯುವಂತಾಗಲು ಅನುದಾನ ಒದಗಿಸಿದ್ದೆ. ಇದೇ ಕಾರಣಕ್ಕೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಲೂ ಕಾರಣವಾಯಿತು. ಕಲ್ಯಾಣ ನಾಡಿನ ಜನ ನನ್ನನ್ನು ಪ್ರೀತಿಯಿಂದ ಆಯ್ಕೆ ಮಾಡಿದರು’ ಎಂದು ಸ್ಮರಿಸಿದರು.

ಕಸಾಪ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ‘ಶಿಕ್ಷಣ ಪ್ರೇಮಿ ಅಬ್ದುಲ್‌ ಖದೀರ್‌ ಅವರು ಜ್ಞಾನ ದಾಸೋಹದ ಮೂಲಕ ಇತಿಹಾಸದಲ್ಲಿ ಅಚ್ಚುಳಿಯುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಅವರ 60ನೇ ಜನ್ಮದಿನದ ಸಂದರ್ಭದಲ್ಲಿ ಪುಸ್ತಕ ಪ್ರಕಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ‘ ಎಂದು ಬಣ್ಣಿಸಿದರು.

‘ಲೇಖಕಿ ಕಸ್ತೂರಿ ಅವರು ಕೇವಲ 42 ಪುಟಗಳ ಕೃತಿಯಲ್ಲಿ ಖದೀರ್‌ ಅವರ ಬದುಕಿನ ಚಿತ್ರಣ ನೀಡುವುದರ ಜತೆಗೆ ಸಾಧನೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿರುವ ಕನ್ನಡ ಮಾಧ್ಯಮದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದಾರೆ. ನೂರು ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ’ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಂ.ಜಿ.ಗಂಗನಪಳ್ಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಗಂದಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಲೇಖಕಿ ಕಸ್ತೂರಿ ಪಟಪಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಹಾಗೂ ಶಿವಶಂಕರ ಟೋಕರೆ ಇದ್ದರು.

ಕಲಾವಿದ ವೈಜನಾಥ ಸಜ್ಜನ ಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರು ನಿರೂಪಿಸಿದರು. ಮೇನಕಾ ಪಾಟೀಲ ಸ್ವಾಗತಿಸಿದರು. ಟಿ.ಎ.ಮಚ್ಚೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.