ADVERTISEMENT

ಕಳ್ಳರ ಕಳ್ಳ ಖೂಬಾರಿಂದ ನೀತಿ ಪಾಠ ಕಲಿಯಬೇಕಿಲ್ಲ

ಸಂಸದ ಖೂಬಾ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:09 IST
Last Updated 6 ನವೆಂಬರ್ 2020, 15:09 IST

ಬೀದರ್: ಬ್ರಿಮ್ಸ್ ಆಸ್ಪತ್ರೆಯ ಶೌಚಾಲಯ ಸ್ವಚ್ಛತಾ ಗುತ್ತಿಗೆ ಸಿಬ್ಬಂದಿಯ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ತಮ್ಮ ಸೋದರನ ಜತೆ ಸೇರಿ ಕಳ್ಳತನ ಮಾಡುತ್ತಿರುವ ಸಂಸದ ಭಗವಂತ ಖೂಬಾಗೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ವಿರುದ್ಧ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಭಾಲ್ಕಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ್ ಹಾಗೂ ಕಾಂಗ್ರೆಸ್ ರೈತ ಮೋರ್ಚಾದ ಪ್ರಕಾಶ ಘಾಳೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬಿಜೆಪಿ ನಡೆಸಿದ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿರುವ ಖೂಬಾ ಸಂಸ್ಕೃತಿ ಎಂಥದ್ದು ಎನ್ನುವುದು ಜಗಜ್ಜಾಹೀರಾಗಿದೆ. ಕಾಮಾಲೆ ಕಣ್ಣಿನವರಿಗೆ ಕಂಡಿದ್ದೆಲ್ಲಾ ಹಳದಿ ಅನ್ನುವಂತೆ, ಕಳ್ಳರ ಕಳ್ಳರಾದ ಖೂಬಾಗೆ ಎಲ್ಲರೂ ಹಾಗೇ ಕಾಣಿಸುತ್ತಾರೆ ಎಂದು ಕುಹಕವಾಡಿದ್ದಾರೆ.

ಬ್ರಿಮ್ಸ್ ಆಸ್ಪತ್ರೆಯಲ್ಲಿ 96ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿಗೆ ನ್ಯಾಯಯುತವಾಗಿ ಕೊಡಬೇಕಾದ ಸಂಬಳ-ಭತ್ಯೆ ನೀಡದೆ, ಪಿ.ಎಫ್, ಇ.ಎಸ್.ಐ ವಂತಿಗೆ ಹಣವನ್ನೂ ಕಟ್ಟದೆ ಲಕ್ಷಾಂತರ ರೂಪಾಯಿ ನುಂಗಿ ಹಾಕುವಂತಹ ಕೀಳು ಮಟ್ಟಕ್ಕೆ ಇಳಿದಿರುವ ಖೂಬಾ ನಿಜ ಬಣ್ಣ ಈಗ ಬಯಲಾಗಿದೆ. ಕಡುಬಡವರ ಹೊಟ್ಟೆ ಮೇಲೆ ಹೊಡೆವ ಖೂಬಾ ಕರುಣೆ ಇಲ್ಲದ ಅಮಾನವೀಯ ವ್ಯಕ್ತಿ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ವಸತಿ ಯೋಜನೆ ಫಲಾನುಭವಿಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವುದರ ವಿರುದ್ಧ ಪ್ರತಿಭಟನಾ ಸಮಾವೇಶಕ್ಕೆ ಗಣೇಶ ಮೈದಾನ ನೀಡುವಂತೆ ಮೊದಲು ಕೇಳಿದ್ದೇ ಜಿಲ್ಲಾ ಕಾಂಗ್ರೆಸ್ ಸಮಿತಿ. ಜಿಲ್ಲಾಡಳಿತ ಅನುಮತಿ ನಿರಾಕರಿಸಿತು. ಆದರೆ, ಆಡಳಿತಾರೂಢ ಬಿಜೆಪಿಯ ಒತ್ತಡಕ್ಕೆ ಮಣಿದು ಗಣೇಶ ಮೈದಾನವನ್ನು ಬಿಜೆಪಿಗೆ ನೀಡಿದೆ. ಇದು ಘೋರ ಅನ್ಯಾಯ. ವಸ್ತು ಸ್ಥಿತಿ ಹೀಗಿರುವಾಗ ಖಂಡ್ರೆ ಅವರು ಚರ್ಚೆಗೆ ಬರಲಿಲ್ಲ ಎನ್ನುವ ಖೂಬಾಗೆ ಎರಡು ನಾಲಿಗೆ ಇವೆಯೇ ಎಂದು ಪ್ರಶ್ನಿಸಿದ್ದಾರೆ. ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿ ಹೇಳಿದ್ದಾರೆ.

ಹಿಂದುಳಿದ ಬೀದರ್ ಜಿಲ್ಲೆಗೆ ಸಂಸದ ಖೂಬಾ ಕಳೆದ ಆರು ವರ್ಷದಲ್ಲಿ ಕೊಟ್ಟಿರುವ ಕೊಡುಗೆ ಏನು, ಒಂದೆ ಒಂದು ಹೊಸ ಸಾರ್ವಜನಿಕ ವಲಯದ ಕಾರ್ಖಾನೆ ತಂದಿಲ್ಲ, ಒಂದು ಐಐಟಿ, ಐಐಎಂ, ಏಮ್ಸ್ ತಂದಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಗುಂಡಿ ಬಿದ್ದು ಮರಣ ಕೂಪಗಳಾಗಿವೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಗೆ ಮೂರು ಕಾಸಿನ ಕೆಲಸ ಮಾಡದ ಖೂಬಾ ಕಾಂಗ್ರೆಸ್ ನಾಯಕರ ಮೇಲೆ ವೃಥಾ ಆರೋಪ ಮಾಡುತ್ತಾ ಕಾಲ ಹರಣ ಮಾಡುವುದನ್ನು ಬಿಟ್ಟು, ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಿ, ಇಲ್ಲದಿದ್ದರೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಜ್ಯೋತಿ ಆರುವ ಮೊದಲು ಹೀಗೆ ಜೋರಾಗಿ ಉರಿಯುತ್ತದೆ. ಖೂಬಾ ಸ್ಥಿತಿಯೂ ಅದೇ ಆಗುತ್ತದೆ. ನಮ್ಮ ನಾಯಕ ಈಶ್ವರ ಖಂಡ್ರೆ ಅವರ ಬಗ್ಗೆ ನಾಲಿಗೆ ಹರಿಬಿಟ್ಟರೆ ಅವರು ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.