ADVERTISEMENT

ಒಳ್ಳೆಯ ಉದ್ದೇಶದ ಹೋರಾಟದಿಂದ ಯಶ: ಶಿವಯೋಗೀಶ್ವರ ಸ್ವಾಮೀಜಿ

ಪಂಚಾಕ್ಷರಿ ಗವಾಯಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಶಿವಯೋಗೀಶ್ವರ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:13 IST
Last Updated 29 ಫೆಬ್ರುವರಿ 2020, 10:13 IST
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ರಾಜ್ಯ ಮಟ್ಟದ ಸಂಗೀತ ಹಾಗೂ ನೃತ್ಯೋತ್ಸವವನ್ನು ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಮೇಶ ಬೇಜಗಂ, ಬಿ.ಲಕ್ಷ್ಮಣರಾವ್ ಆಚಾರ್ಯ, ವಿಜಯಕುಮಾರ ಸೋನಾರೆ ಇದ್ದಾರೆ
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ರಾಜ್ಯ ಮಟ್ಟದ ಸಂಗೀತ ಹಾಗೂ ನೃತ್ಯೋತ್ಸವವನ್ನು ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಮೇಶ ಬೇಜಗಂ, ಬಿ.ಲಕ್ಷ್ಮಣರಾವ್ ಆಚಾರ್ಯ, ವಿಜಯಕುಮಾರ ಸೋನಾರೆ ಇದ್ದಾರೆ   

ಬೀದರ್: ‘ಒಳ್ಳೆಯ ಉದ್ದೇಶದಿಂದ ಹೋರಾಟ ಮಾಡಿದವರು ಒಂದಿಲ್ಲೊಂದು ದಿನ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ಪಂಚಾಕ್ಷರಿ ಗವಾಯಿ ಅವರೇ ಸಾಕ್ಷಿ’ ಎಂದು ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪಂಚಾಕ್ಷರಿ ಗವಾಯಿ ಅವರ 75ನೇ ಪುಣ್ಯತಿಥಿ ಹಾಗೂ ಪಂಚಾಕ್ಷರ ಗವಾಯಿ ಸೇವಾ ಸಂಘದ 17ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಗೀತ ಹಾಗೂ ನೃತ್ಯೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಗೀತಕ್ಕೆ ಗಾಯನವೂ ಬೇಕು, ವಾದನವೂ ಬೇಕು. ಪಂಚಾಕ್ಷರಿ ಗವಾಯಿ ಅವರು ಎರಡರಲ್ಲೂ ಪಾಂಡಿತ್ಯ ಪಡೆದಿದ್ದರು. ಸಂಗೀತ ಕ್ಷೇತ್ರದಲ್ಲಿ ಉತ್ತುಂಗಕ್ಕೆ ತಲುಪಿದ್ದರು. ಅವರ ಗಾಯನ ಇಂದಿಗೂ ಸಂಗೀತ ಪ್ರೇಮಿಗಳಿಗೆ ಪರಮಾನಂದ ನೀಡುತ್ತದೆ’ ಎಂದು ಹೇಳಿದರು.

ADVERTISEMENT

‘ತಾನಸೇನರು ಬೆಳಗಿನ ಜಾವ 3 ಗಂಟೆಗೆ ಎದ್ದು ಯುಮುನಾ ನದಿ ದಂಡೆಯ ಮೇಲೆ ಸಂಗೀತಾಭ್ಯಾಸ ಮಾಡುತ್ತಿದ್ದರೆ, ಪಂಚಾಕ್ಷರ ಗವಾಯಿ ಅವರು ಮಲಪ್ರಭಾ ನದಿ ತಟದ ಗುಡಿಸಲ್ಲಿ ಹಾಡುತ್ತಿದ್ದರು. ಆ ಮೂಲಕ ಸಾಕಷ್ಟು ಸಾಧನೆ ಮಾಡಿದರು. ಹಾನಗಲ್‌ ಕುಮಾರ ಶಿವಯೋಗಿಗಳ ಮನವಿ ಮೇರೆಗೆ ಬಸರಿಗಿಡದ ವೀರಪ್ಪನವರು ಗದಗಿನಲ್ಲಿ ತಮ್ಮ ಜಾಗದಲ್ಲಿ ಅವರಿಗೆ ಒಂದು ಪಾಠ ಶಾಲೆ ಕಟ್ಟಿಸಿಕೊಟ್ಟಿದ್ದರು. ಅದು ಈಗ ಹೆಮ್ಮರವಾಗಿ ಬೆಳೆದಿದೆ’ ಎಂದು ತಿಳಿಸಿದರು.

‘ಪಂಚಾಕ್ಷರಿ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ಅವರ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ಗವಾಯಿಗಳು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಪ್ರಸಿದ್ಧ ಗಾಯಕರೆನಿಸಿಕೊಂಡಿದ್ದರು. ಅನೇಕ ಶಿಷ್ಯ ವೃಂದವನ್ನು ಬೆಳೆಸಿದರು. ಇಂದು ಶ್ರೇಷ್ಠ ಕಲಾವಿದರು ರಾಷ್ಟ್ರಮಟ್ಟದಲ್ಲಿ ಪಂಚಾಕ್ಷರಿ ಗವಾಯಿ ಸ್ವರದಲ್ಲಿ ಹಾಡುತ್ತಿದ್ದಾರೆ. ಇದು ನಾಡಿನ ಜನರಿಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಬಣ್ಣಿಸಿದರು.

‘ಸಂಗೀತ ಸೇವೆಯಲ್ಲೇ ತಮ್ಮ ಬದುಕು ಸವಿಸಿದ್ದ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರಾಗಿದ್ದಾರೆ’ ಎಂದು ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಬಣ್ಣಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಗೀತಕಾರ ಉಸ್ತಾದ ಶೇಖ ಹನ್ನುಮಿಯಾ ಮಾತನಾಡಿ, ‘ಕಲಾವಿದರ ಪಾಲಿಗೆ ಸಂಗೀತವೇ ದೇವರು. ದೇವರನ್ನು ನಿರಂತರವಾಗಿ ಆರಾಧಿಸುವ ವ್ಯಕ್ತಿ ಮುಂದೊಂದು ದಿನ ಮಹಾನ್‌ ಸಾಧಕನಾಗುತ್ತಾನೆ. ಪಂಚಾಕ್ಷರಿ ಗವಾಯಿ ಅವರು ಸಂಗೀತವನ್ನು ಪೂಜಿಸಿದ್ದರಿಂದಲೇ ಮಹಾನ್‌ ವ್ಯಕ್ತಿಗಳಾದರು’ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷ ಬಿ.ಲಕ್ಷ್ಮಣರಾವ್ ಆಚಾರ್ಯ, ಮುಖ್ಯ ಅತಿಥಿಗಳಾಗಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ ಬೇಜಗಂ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಾಹಿತಿ ವಿ.ಎಂ.ಡಾಕುಳಗಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಪತ್ರಕರ್ತ ಸಂಜಯ ದಂತಕಾಳೆ, ದೇವೇಂದ್ರ ಕಮಲ್‌ ಇದ್ದರು.

ಯಶವಂತ ಯಾತನೂರ ಸ್ವಾಗತಿಸಿದರು. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಎಸ್‌.ವಿ.ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಬಿ.ಕುಚಬಾಳ ಹಾಗೂ ಮಹಾರುದ್ರ ಡಾಕುಳಗಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಬಾಬುರಾವ್ ದಾನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.