ಚಿಟಗುಪ್ಪ: ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ತೇರು ಮೈದಾನದಲ್ಲಿ ಅಗ್ನಿ ಕುಂಡದಲ್ಲಿ ಗಂಧ, ಬಿಲ್ವ ಹಾಗೂ ಬನ್ನಿ ಮರದ ಕಟ್ಟಿಗೆಗಳಿಂದ ಕೆಂಡ ತಯಾರಿಸಲಾಗಿತ್ತು.
ಅಗ್ನಿ ಕುಂಡಕ್ಕೆ ಗುರುಲಿಂಗ ಶಿವಾಚಾರ್ಯರು ಪೂಜೆ ಸಲ್ಲಿಸಿದ ಬಳಿಕ ವೀರಭದ್ರಸ್ವಾಮಿ ಮೂರ್ತಿ ಕೂರಿಸಲಾಗಿದ್ದ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡ ಹಾಯ್ದರು.
ದೇವರನ್ನು ಹೊತ್ತ ವೀರಭದ್ರಸ್ವಾಮಿ ಪೂಜಾರಿ ಕೆಂಡದ ಕುಂಡದಲ್ಲಿ ನಡೆದರು. ಹರಕೆ ಹೊತ್ತ ಭಕ್ತರು ಕೆಂಡ ತುಳಿದರು. ಉಪವಾಸ ವ್ರತ ಆಚರಿಸಿದವರು. ಕಟ್ಟುನಿಟ್ಟಿನ ಮಡಿವಂತಿಕೆ ಅನುಸರಿಸಿದವರು ಮಾತ್ರ ಕೆಂಡ ತುಳಿಯುವ ಸಂಪ್ರದಾಯ ಇದೆ.
ಗುಗ್ಗಳ ಸೇವೆ: ಇದಕ್ಕೂ ಮುನ್ನ ದೇವರ ಉಚ್ಛಾಯ ನಡೆಯಿತು. ಚಿಕ್ಕ ತೇರಿನ ಮೇಲೆ ವೀರಭದ್ರ ಸ್ವಾಮಿಯನ್ನು ಕೂರಿಸಿ ಎಳೆಯಲಾಯಿತು.
ಈ ಸಂದರ್ಭದಲ್ಲಿ ದೇವರ ಗುಗ್ಗಳ ಸೇವೆ ನಡೆಯಿತು. ಕೊಬ್ಬರಿ, ಎಣ್ಣೆ, ಗಂಧದ ತುಂಡುಗಳನ್ನು ಗುಗ್ಗಳದ ಸೋರೆಗೆ ಹಾಕಿ ಸುಡಲಾಯಿತು. ವೀರಭದ್ರ ದೇವರ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಡೊಳ್ಳು, ನಗಾರಿ, ತಮಟೆ, ಕಹಳೆ ಸೇರಿ ವಿವಿಧ ಜನಪದ ಕಲಾ ತಂಡಗಳು ಉಚ್ಛಾಯ ಮೆರವಣಿಗೆಗೆ ಮೆರುಗು ನೀಡಿದವು.
ವೀರಭದ್ರ ದೇವರ ಗುಗ್ಗಳ ಮತ್ತು ಅಗ್ನಿಕುಂಡ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ದಾಸೋಹ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಭಕ್ತರು ಒಂದು ಕಿ.ಮೀ ವರೆಗೂ ಕೆಂಡ ತುಳಿಯಲು ಸರತಿಯಲ್ಲಿ ಸ್ನಾನ ಮಾಡಿ ಹಸಿ ಬಟ್ಟೆಯಲ್ಲಿ ನಿಂತಿದ್ದರು. ಕೆಂಡ ತುಳಿದ ನಂತರ ದೇಗುಲಕ್ಕೆ ಆಗಮಿಸಿ ತೆಂಗು–ಕರ್ಪೂರ್, ಪುಷ್ಪಮಾಲೆಯೊಂದಿಗೆ ದೇವರಿಗೆ ನಮಸ್ಕರಿಸಿ ದೇಗುಲದಿಂದ ಆರಂಭಿಸಲಾದ ದಾಸೋಹ ಪ್ರಸಾದ ಸೇವನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.