ADVERTISEMENT

ಟೋಕರಿ ಕೋಲಿ ಪ್ರಮಾಣಪತ್ರಕ್ಕೆ ಪ್ರಭಾವಿಗಳಿಂದ ತಡೆ: ಲಚ್ಚಪ್ಪ ಜಮಾದಾರ ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:28 IST
Last Updated 29 ಅಕ್ಟೋಬರ್ 2025, 6:28 IST
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಕೋಲಿ ಸಮಾಜ ಜನಜಾಗೃತಿ ಸಮಾವೇಶದ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕರಾದ ಶರಣು ಸಲಗರ, ತಿಪ್ಪಣ್ಣಪ್ಪ ಕಮಕನೂರ, ಮಾಲಾ ನಾರಾಯಣರಾವ್ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಕೋಲಿ ಸಮಾಜ ಜನಜಾಗೃತಿ ಸಮಾವೇಶದ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕರಾದ ಶರಣು ಸಲಗರ, ತಿಪ್ಪಣ್ಣಪ್ಪ ಕಮಕನೂರ, ಮಾಲಾ ನಾರಾಯಣರಾವ್ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಟೋಕರಿ ಕೋಲಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡುವುದಕ್ಕೆ ಪ್ರಭಾವಿ ರಾಜಕಾರಣಿಗಳು ತಡೆಯೊಡ್ಡಿ ತೊಂದರೆ ನೀಡುತ್ತಿದ್ದಾರೆ’ ಎಂದು ಕೋಲಿ-ಕಬ್ಬಲಿಗ ಪರಿಶಿಷ್ಟ ಪಂಗಡ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಆರೋಪಿಸಿದರು.

ನಗರದ ತ್ರಿಪುರಾಂತ ಮಹರ್ಷಿ ವಾಲ್ಮೀಕಿ ವೃತ್ತದ ಭವನದಲ್ಲಿ ಮಂಗಳವಾರ ನಡೆದ ಕೋಲಿ ಜನಜಾಗೃತಿ ಸಮಾವೇಶ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಟೋಕರಿ ಕೋಲಿ, ಕೋಲಿ, ಕಬ್ಬಲಿಗ, ತಳವಾರ ಇವು ಒಂದೇ ಜಾತಿ ಆಗಿದೆ. ಆದರೆ, ಕೆಲ ಇತರೆ ಜಾತಿಯವರು ವಿನಾಃ ಕಾರಣ ವಿರೋಧಿಸುತ್ತಿದ್ದಾರೆ. ವಾಲ್ಮೀಕಿ ಮಹರ್ಷಿ ಸಹ ವಾಲ್ಯಾ ಕೋಳಿ ಎಂದು ಸ್ಪಷ್ಟವಾಗಿ ದಾಖಲೆಗಳಲ್ಲಿ ಇದ್ದರೂ ವಾಲ್ಮೀಕಿ ನಮ್ಮವರು ಎಂದು ಇತರರು ಪ್ರತಿಪಾದಿಸುತ್ತಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹರ್ಷಿ ವಾಲ್ಮೀಕಿ ಕೋಲಿ ಸಮುದಾಯದ ಕುಲಗುರು ಆಗಿದ್ದಾರೆ’ ಎಂದರು.

ADVERTISEMENT

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾತನಾಡಿ, ‘ಕೋಲಿ ಸಮಾಜದ ಅಭಿವೃದ್ಧಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಸಚಿವ ಖಂಡ್ರೆಯವರು ಸಮಾಜ ಭವನ ಮಂಜೂರು ಮಾಡಿ ಇತರೆ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ಟೋಕರಿ ಕೋಲಿ ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬೊಕ್ಕೆ ಮಾತನಾಡಿ, ‘ನಗರದಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಗವಿಯ 5 ಎಕರೆ ಜಾಗ ಗವಿಯ ದೇವಸ್ಥಾನ ಸಮಿತಿಗೆ ವಹಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಕಾಡಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ಹೊನ್ನಾನಾಯಕ್, ಅಧ್ಯಕ್ಷತೆ ವಹಿಸಿದ್ದ ಗೋವಿಂದ ಚಾಮಾಲೆ, ಕೋಲಿ ಸಮಾಜ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಜಮಾದಾರ, ನಾಗಪ್ಪ ಚಾಮಾಲೆ, ದತ್ತು ಪದ್ಮೆ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ತುಕಾರಾಮ ರೊಡ್ಡೆ, ರಾಜಕುಮಾರ ಗುಂಡೆ ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ರತ್ನಾಕಾಂತ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಗೀರುದ್ದೀನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ, ಪೋಪಟ್ ಜಮಾದಾರ, ವಾಲ್ಮೀಕಿ ಮುಡಬಿ, ಶಶಿಕಾಂತ ದುರ್ಗೆ ಉಪಸ್ಥಿತರಿದ್ದರು.

ಮಾಲಾ ಉತ್ಸಾಹಕ್ಕೆ ಮಹಿಳೆಯರ ಸಾಥ್‌

ಕಾರ್ಯಕ್ರಮದ ಮೊದಲು ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಎಂದಿಲ್ಲದಂತೆ ಕುಣಿದರು. ಇವರ ಉತ್ಸಾಹ ಕಂಡು ಗ್ರಾಮೀಣ ಭಾಗದಿಂದ ಬಂದಿದ್ದ ಎಂದೂ ಕುಣಿಯದ ಮಹಿಳೆಯರು ಸಹ ಹೆಜ್ಜೆ ಹಾಕಿ ಸಾಥ್‌ ನೀಡಿದರು. ಶಾಸಕ ಶರಣು ಸಲಗರ ಅವರು ಡಿಜೆ ವಾಹನದ ಮೇಲೇರಿ ಧ್ವಜ ಹಿಡಿದು ಕುಣಿದಿರುವುದು ಗಮನ ಸೆಳೆಯಿತು. ಬಹುತೇಕರು ಮಹರ್ಷಿ ವಾಲ್ಮೀಕಿ ಚಿತ್ರವಿರುವ ಭಗವಾ ಧ್ವಜ ಹಿಡಿದಿದ್ದರು. ಕೋಲಾಟ ಡೊಳ್ಳು ಕುಣಿತ ಹಾಗೂ ಇತರೆ ವಾದ್ಯ ಮೇಳದವರಿದ್ದರು. ಸಾವಿರಾರು ಜನರು ಪಾಲ್ಗೊಂಡಿದ್ದರು.

ಕೋಲಿ ಸಮಾಜ ಭವನ ಮಂಜೂರು
‘ಕೋಲಿ ಸಮಾಜ ಭವನಕ್ಕೆ ₹2 ಕೋಟಿ ಮಂಜೂರು ಮಾಡುತ್ತೇನೆ. ನಗರದ ರಸ್ತೆ ಸುಧಾರಣೆ ಶೀಘ್ರ ಆರಂಭಿಸಲಾಗುವುದು. ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ನೈತಿಕ ಮೌಲ್ಯಗಳನ್ನು ಸಾರಿದ್ದಾರೆ. ಆದ್ದರಿಂದ ಎಲ್ಲರೂ ಶ್ರೀರಾಮನ ಆದರ್ಶ ಪಾಲಿಸಬೇಕು. ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.