ADVERTISEMENT

Road Safety: ಬೀದರ್‌ನ ಬಹುತೇಕರಿಗೆ ಬೇಕಿಲ್ಲ ಹೆಲ್ಮೆಟ್‌, ಇಲ್ಲ ಪೊಲೀಸರ ಭಯ..

ಬೀದರ್‌ ಜಿಲ್ಲಾ ಪೊಲೀಸರಿಂದ ದಂಡದಲ್ಲಿ ಸಾಧನೆ, ಪ್ರಗತಿಯಲ್ಲಿ ನಿರಾಸೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಫೆಬ್ರುವರಿ 2026, 7:29 IST
Last Updated 13 ಫೆಬ್ರುವರಿ 2026, 7:29 IST
ಬೀದರ್‌ನ ಬೊಮ್ಮಗೊಂಡೇಶ್ವರ ಮುಖರಸ್ತೆಯ ದೃಶ್ಯವಿದು. ಬಹುತೇಕ ಬೈಕ್‌ ಸವಾರರು ಹೆಲ್ಮೆಟ್‌ ಇಲ್ಲದೆ ರಾಜಾರೋಷವಾಗಿ ಬೈಕ್‌ ಓಡಿಸುತ್ತಿರುವುದು
ಬೀದರ್‌ನ ಬೊಮ್ಮಗೊಂಡೇಶ್ವರ ಮುಖರಸ್ತೆಯ ದೃಶ್ಯವಿದು. ಬಹುತೇಕ ಬೈಕ್‌ ಸವಾರರು ಹೆಲ್ಮೆಟ್‌ ಇಲ್ಲದೆ ರಾಜಾರೋಷವಾಗಿ ಬೈಕ್‌ ಓಡಿಸುತ್ತಿರುವುದು   

ಬೀದರ್‌: ಇಲ್ಲಿನ ಬೈಕ್‌ ಸವಾರರಿಗೆ ಪೊಲೀಸರ ಬಗ್ಗೆ ಎಳ್ಳಷ್ಟೂ ಭಯವಿಲ್ಲ! ಒಂದುವೇಳೆ ಆ ಭಯವಿದ್ದಿದ್ದರೆ ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹೆಲ್ಮೆಟ್‌ ಕಡ್ಡಾಯವಾಗಿ ಧರಿಸುತ್ತಿದ್ದರು.

ವಾಹನ ಸವಾರರು ಒಂದು ರೀತಿಯಲ್ಲಿ ಸಂಕಲ್ಪ ತೊಟ್ಟು, ಹಟಕ್ಕೆ ಬಿದ್ದಿದ್ದಾರೆ ಅನಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಒಮ್ಮೆ ಓಡಾಡಿದರೆ ಎಂತಹವರಿಗೂ ಇದು ಅನಿಸದೇ ಇರದು. ನಗರದ ಪ್ರಮುಖ ವೃತ್ತಗಳು, ರಸ್ತೆಗಳುದ್ದಕ್ಕೂ ನಿತ್ಯ ಟ್ರಾಫಿಕ್‌ ಪೊಲೀಸರು ಇರುತ್ತಾರೆ. ಅವರೊಂದಿಗೆ ಹೆಚ್ಚುವರಿಯಾಗಿ ಸಿವಿಲ್‌ ಪೊಲೀಸರು ಹಾಗೂ ಗೃಹರಕ್ಷಕರು ಇರುತ್ತಾರೆ. ಇಷ್ಟಾಗಿಯೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ನೋಡಿದರೆ ನಿರಾಸೆ ಆಗುತ್ತದೆ.

ಅದರಲ್ಲೂ ನಗರದಲ್ಲಿ ಬೇಕಾಬಿಟ್ಟಿ ಬೈಕ್‌ಗಳನ್ನು ಓಡಿಸಲಾಗುತ್ತದೆ. ಅದರಲ್ಲಿ ಹೆಚ್ಚಿನವರು ಸಂಚಾರ ನಿಯಮಗಳನ್ನೇ ಪಾಲಿಸುವುದಿಲ್ಲ. ಬಲದಿಂದ ಬಂದು ಎಡಕ್ಕೆ ಅಥವಾ ಎಡದಿಂದ ಬಂದು ಬಲಕ್ಕೆ ಏಕಾಏಕಿ ಯಾವುದೇ ಮುನ್ಸೂಚನೆ ಅಥವಾ ಇಂಡಿಕೇಟರ್‌ ಬಳಸದೇ ವಾಹನಗಳನ್ನು ಓಡಿಸುತ್ತಾರೆ. ಇಡೀ ರಸ್ತೆಯನ್ನು ಅವರೇ ಆಕ್ರಮಿಸಿಕೊಂಡು ದೊಡ್ಡ ವಾಹನಗಳಿಗೆ ಮುಂದೆ ಹೋಗಲು ಅವಕಾಶ ಕಲ್ಪಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಜೀವರಕ್ಷಕವಾಗಿರುವ ಹೆಲ್ಮೆಟ್‌ ಅನ್ನು ಬಹುತೇಕರು ಧರಿಸುವುದೇ ಇಲ್ಲ.

ADVERTISEMENT

ಕೆಲವರು ಮನೆಯಿಂದ ಹೊರಡುವಾಗ ಹೆಲ್ಮೆಟ್‌ ತೆಗೆದುಕೊಂಡು ಹೋಗುತ್ತಾರೆ. ಆದರೆ, ಅದನ್ನು ಬೈಕಿನ ಸೀಟಿನ ಕೆಳಗಡೆಯೋ ಅಥವಾ ಮುಂಭಾಗದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ, ತಲೆಗೆ ಹಾಕಿಕೊಳ್ಳುವುದಿಲ್ಲ. ಆದರೆ, ಬಹುತೇಕರು ಹೆಲ್ಮೆಟ್‌ ಧರಿಸಲು ಇಷ್ಟಪಡುವುದಿಲ್ಲ. ಅವರಿಗೆ ಯಾರು ಕೇಳುವವರು ಇಲ್ಲದಂತಾಗಿದೆ.

ಯಾವಾಗಲೊಮ್ಮೆ ಪೊಲೀಸರು ಹಿಡಿದು ₹100 ಅಥವಾ ₹200 ದಂಡ ಹಾಕುತ್ತಾರೆ. ಮತ್ತೆ ಆರೇಳು ತಿಂಗಳುಗಳವರೆಗೆ ಕೇಳುವುದಿಲ್ಲ ಎಂಬ ಭಾವನೆ ಬೈಕ್‌ ಸವಾರರಲ್ಲೂ ಬಂದಿದೆ. ಪೊಲೀಸರು ದಂಡಕ್ಕಷ್ಟೇ ಸೀಮಿತ. ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ನಸು ನಕ್ಕು ಮುಂದೆ ಹೋಗುತ್ತಾರೆ.

ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 1,51,290 ಪ್ರಕರಣಗಳು ದಾಖಲಾಗಿವೆ. ₹7.55 ಕೋಟಿ ದಂಡ ಹಾಕಲಾಗಿದೆ. ಆದರೆ, ಏನಾದರೂ ಬದಲಾಗಿದೆಯಾ ಎಂದು ನೋಡಿದರೆ ನಿರಾಸೆ ಎದ್ದು ಕಾಣುತ್ತದೆ.

ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಪ್ರಶ್ನಿಸಿದರೆ, ಜನರಲ್ಲಿ ಹೆಚ್ಚಿನ ಅರಿವು ಬರಬೇಕಿದೆ ಎನ್ನುತ್ತಾರೆ. ಎಸ್ಪಿಗಳು ಬದಲಾಗುತ್ತ ಹೋಗುತ್ತಾರೆ. ಹೊಸಬರು ಬಂದವರು ಕೂಡ ಇದೇ ಮಾತನ್ನು ಹೇಳುತ್ತಾರೆ. ಆದರೆ, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಜನರ ಬೇಸರ.

ಮಹಾನಗರಗಳಲ್ಲಿ ಆಗುತ್ತದೆ ಇಲ್ಲೇಕೆ ಆಗಲ್ಲ

ಬೆಂಗಳೂರು ಹೈದರಾಬಾದ್‌ ಮುಂಬೈ ಚೆನ್ನೈ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಅಲ್ಲಿ ಬೈಕ್‌ ಸವಾರರಷ್ಟೇ ಅಲ್ಲ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಹೆಚ್ಚಿನ ವಾಹನ ದಟ್ಟಣೆ ಇದ್ದರೂ ಸಂಚಾರ ಪೊಲೀಸರು ಹೆಲ್ಮೆಟ್‌ ಧರಿಸುವುದು ಸೀಟ್‌ ಬೆಲ್ಟ್‌ ಧರಿಸುವುದು ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದಾರೆ. ಆದರೆ ಮೂರು ಲಕ್ಷ ಜನಸಂಖ್ಯೆ ಹೊಂದಿರುವ ಬೀದರ್‌ನಂಥ ನಗರದಲ್ಲಿ ಅನುಷ್ಠಾನವೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಹೆಲ್ಮೆಟ್‌ ಇಲ್ಲದಕ್ಕಾಗಿಯೇ ಹೆಚ್ಚಿನ ಸಾವು

ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸುವಾಗ ಅಪಘಾತ ಸಂಭವಿಸಿ ಹೆಚ್ಚಿನವರು ಮೃತಪಡುತ್ತಿದ್ದಾರೆ ಎಂದು ಸ್ವತಃ ಪೊಲೀಸ್‌ ಇಲಾಖೆಯೇ ತಿಳಿಸಿದೆ. ಆದರೆ ಅನುಷ್ಠಾನದಲ್ಲಿ ಬಹಳ ಹಿಂದೆ ಬಿದ್ದಿದೆ. ಇತ್ತೀಚೆಗೆ ಬೀದರ್ ತಾಲ್ಲೂಕಿನ ಬೆನಕನಳ್ಳಿ ಸಮೀಪ ಒಬ್ಬ ಯುವಕ ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಈ ಎಲ್ಲ ಸಾವುಗಳಿಗೆ ಹೆಲ್ಮೆಟ್‌ ಇಲ್ಲದಿರುವುದೇ ಮುಖ್ಯ ಕಾರಣ ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.