ADVERTISEMENT

18 ಸಾವಿರ ತಾಂಡಾ ಕಂದಾಯ ಗ್ರಾಮಗಳಾಗಿ ಪರಿವರ್ತನೆ

ಕಂದಾಯ ಸಚಿವ ಆರ್. ಅಶೋಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 13:35 IST
Last Updated 28 ಮೇ 2022, 13:35 IST
ಸಚಿವ ಆರ್. ಅಶೋಕ
ಸಚಿವ ಆರ್. ಅಶೋಕ   

ಔರಾದ್: ‘ರಾಜ್ಯದ 18 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು. ಈಗಾಗಲೇ 800 ತಾಂಡಾಗಳು ಕಂದಾಯ ಗ್ರಾಮಗಳಾಗಿದ್ದು, ಬೀದರ್ ಜಿಲ್ಲೆಯ 98 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ತಾಲ್ಲೂಕಿನ ವಡಗಾಂವ್ (ಡಿ) ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯದ ಬಳಿಕ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಂದಾಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಈವರೆಗೆ ರಾಜ್ಯದ 200 ಕಡೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದಾರೆ’ ಎಂದರು.

‘ಪ್ರತಿ ತಿಂಗಳು ನಾಲ್ಕು ದಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಜನರ ಕುಂದು– ಕೊರತೆ ಆಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಲಾಗಿದೆ. ಮುಂದಿನ ಸಲ ಹೆಚ್ಚು ದಲಿತರು ಇರುವ ಕಡೆ ಗ್ರಾಮ ವಾಸ್ತವ್ಯ ಮಾಡುವೆ. ಚಿತ್ರದುರ್ಗ ಜಿಲ್ಲೆಯ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಅಲ್ಲಿನ ದಲಿತರಿಗೆ ಕನಿಷ್ಠ ನಾಲ್ಕು ಎಕರೆ ಜಮೀನು ಕೊಡುವ ಉದ್ದೇಶವಿದೆ’ ಎಂದರು.‌

ADVERTISEMENT

‘ನಾನು ಸುಮ್ಮನೆ ಗ್ರಾಮ ವಾಸ್ತವ್ಯ ಮಾಡಿ ಹೋಗುವುದಿಲ್ಲ. ಪ್ರತಿ ತಿಂಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಗತಿ ಪರಿಶೀಲಿಸುವೆ. ಸಾಧ್ಯವಾದರೆ ಮತ್ತೊಮ್ಮೆ ಗ್ರಾಮಕ್ಕೆ ಭೇಟಿ ನೀಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.