ಬಸವಕಲ್ಯಾಣ: ‘ನಿಸ್ವಾರ್ಥ ಸೇವೆಗೆ ಜನಮನ್ನಣೆ ಅಗತ್ಯವಾಗಿದೆ. ಸಮಾಜ ಕಾರ್ಯಕರ್ತರು ಹಾಗೂ ಪತ್ರಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸುತ್ತಾರೆ. ಅಂಥವರ ಬಗ್ಗೆ ಗೌರವ ತೋರುವುದು ಎಲ್ಲರ ಕರ್ತವ್ಯ’ ಎಂದು ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದ್ದಾರೆ.
ನಗರದ ಪಂಚಾಯತರಾಜ್ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ, ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ನ್ಯಾಯಕ್ಕಾಗಿ ಹಲವಾರು ಜನರು ಶ್ರಮಿಸುತ್ತಾರೆ. ಪತ್ರಿಕಾರಂಗವೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜದ ಅಂಕುಡೊಂಕು ತಿದ್ದಿದಾಗ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ’ ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದಿಲೀಪಕುಮಾರ ಉತ್ತಮ ಮಾತನಾಡಿ, ‘ಸತತ ಶ್ರಮದಿಂದ ವಿದ್ಯಾಭ್ಯಾಸಗೈದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣ ಆಗಬಹುದು. ಲೋಕದ ಜ್ಞಾನ ಪಡೆದುಕೊಳ್ಳುವುದಕ್ಕಾಗಿ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.
ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೆಗಾಂವ ಮಾತನಾಡಿ, ‘ಜಗತ್ತಿನಲ್ಲಿ ಎಲ್ಲದರಲ್ಲೂ ಸ್ಪರ್ಧೆ ಇದ್ದು ಅದಕ್ಕೆ ಹೊಂದಿಕೊಂಡು ಕೆಲಸ ನಿರ್ವಹಿಸಬೇಕು. ಕಠಿಣ ಪರಿಶ್ರಮ ಅಗತ್ಯ. ಪತ್ರಿಕೆಗಳಿಂದ ವಿವಿಧ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದರು.
ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಬಾವಿದೊಡ್ಡಿ, ಮುಖಂಡ ಆಕಾಶ ಖಂಡಾಳೆ, ಪತ್ರಕರ್ತ ಕಲ್ಯಾಣರಾವ್ ಮದರಗಾಂವಕರ್, ಡಾ.ಬಸವರಾಜ ಸ್ವಾಮಿ, ಮಹಾದೇವ ಪೂಜಾರಿ, ಹಣಮಂತ ಕೋಟೆ, ಲಕ್ಷ್ಮಿ ಪೋಪಟೆ ಮಾತನಾಡಿದರು.
ನಿರ್ಗುಡಿ ಭಾಗ್ಯವಂತಿ ಮಾತಾಜಿ, ಪಾರ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ಆಶಾರಾಣಿ ಸಂಗಶೆಟ್ಟಿ ಬಾವಿದೊಡ್ಡಿ, ಪತ್ರಕರ್ತ ಉದಯಕುಮಾರ ಮುಳೆ, ಪ್ರದೀಪ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಮಲ್ಲಿಕಾರ್ಜುನ ಬಂಡೆ, ಡಿ.ಕೆ.ಪ್ರಹ್ಲಾದ್, ಮಹಾಲೇಶ, ಉಪನ್ಯಾಸಕರಾದ ರೇಣುಕಾ, ಸುನಿತಾ, ದೇವಿಕಾ, ಮಾಯಾ, ಚಾಂದಸಾಬ, ಪ್ರೀತಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರ ಸನ್ಮಾನ:
ಕಾರ್ಯಕ್ರಮದಲ್ಲಿ ಪಂಚಾಯತರಾಜ್ ಪ್ರೌಢಶಾಲೆ ಮತ್ತು ಕಾಲೇಜಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ತಾಲ್ಲೂಕಿನ ಪತ್ರಕರ್ತರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಬಾವಿದೊಡ್ಡಿ ಎಲ್ಲರಿಗೂ ಪ್ರಮಾಣಪತ್ರ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.