ಬೀದರ್: ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದಿದ್ದರೂ ಮಹಿಳೆಯ ಶಸ್ತ್ರಚಿಕಿತ್ಸೆ ಮಾಡಿ ಅವರ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿ ಮೂವರಿಗೆ ಇಲ್ಲಿಯ 2ನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2ನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಅಬ್ದುಲ್ ಖಾದರ್ ಅವರು ಆರೋಪಿಗಳಾದ ಡಾ.ರಾಜಶ್ರೀ ಶಿವರಾಜ್ ಬಿರಾದಾರ, ಡಾ.ವೈಜಿನಾಥ ಬಸಪ್ಪ ಬಿರಾದಾರ ಹಾಗೂ ಸಾಯಿಬಣ್ಣ ಮಾಣಿಕ ಅಂಬಾಟೆಗೆ
ಎರಡು ವರ್ಷ ಜೈಲು ಶಿಕ್ಷೆ, ತಲಾ ₹ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದ್ದಾರೆ. ನಾಲ್ಕನೇ ಆರೋಪಿ ಡಾ.ರಾಜಶೇಖರ ವೀರಭದ್ರಪ್ಪ ಪಾಟೀಲಗೆ ಐಪಿಸಿ ಕಲಂ 2002ರ ಜತೆ 34 ಐಪಿಸಿ ಅಡಿ ಆರು ತಿಂಗಳು ಜೈಲು ಹಾಗೂ ₹ 5 ಸಾವಿರ ದಂಡ ವಿಧಿಸಿದ್ದಾರೆ.
ಘಾಳೆಪ್ಪ ಔರಾದಕರ್ ಅವರ ಪತ್ನಿ ಸಂಪಾವತಿ ಅವರು ಜೆ.ಪಿ.ನಗರದ ಸುಶ್ರೂತ ನರ್ಸಿಂಗ್ ಹೋಮ್‌ನಲ್ಲಿ 2014ರ ಅಕ್ಟೋಬರ್ 12 ರಂದು ಮಧ್ಯಾಹ್ನ 1 ಗಂಟೆಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದಿದ್ದರೂ ಸಂಪಾವತಿಯ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿ ನಿರ್ಲಕ್ಷ್ಯ ತೋರಿದ್ದರು.
ಆರೋಪಿಗಳು ಸ್ವಇಚ್ಛೆಯಿಂದ ಮಹಿಳೆಯನ್ನು ಡಾ.ರಾಜಶೇಖರ ಪಾಟೀಲ ಅವರ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ವರ್ಗಾಯಿಸಿದ್ದಾಗಿ ವೈದ್ಯರು ಹೇಳಿದ್ದರು. ಸಂಪಾವತಿ ಮೊದಲೇ ಮೃತಪಟ್ಟರೂ ಬಿರಾದಾರ ಆಸ್ಪತ್ರೆ ವೈದ್ಯರ ಜತೆ ಶಾಮೀಲಾಗಿ ವಿಷಯ ಬಚ್ಚಿಟ್ಟಿದ್ದರು.
ಡಾ.ರಾಜಶ್ರೀ ಬಿರಾದಾರ, ಡಾ.ವೈಜಿನಾಥ ಬಿರಾದಾರ, ಸಾಯಿಬಣ್ಣ ಅಂಬಾಟೆ ಅವರು ಸಂಪಾವತಿಗೆ ಐದು ತಾಸು ಶಸ್ತ್ರಚಿಕಿತ್ಸೆ ಮಾಡಿ ರಾತ್ರಿ 10 ಗಂಟೆ ವರೆಗೂ ಸಂಬಂಧಿಕರಿಗೆ ಮಾಹಿತಿ ನೀಡಿರಲಿಲ್ಲ. ನಂತರ ಬೇರೆ ಆಸ್ಪತ್ರೆಗೆ ದಾಖಲಿಸಿದ್ದರು. ಸಂಪಾವತಿ ಮೃತಪಟ್ಟ ಸಮಯ ಹಾಗೂ ವೈದ್ಯರು ತಿಳಿಸಿದ ಸಮಯಕ್ಕೂ ತಾಳೆಯಾಗಿರಲಿಲ್ಲ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಕೆಲವು ಅಂಶಗಳು ಬಹಿರಂಗವಾಗಿದ್ದವು.
ಘಾಳೆಪ್ಪ ಔರಾದಕರ್ ನೀಡಿದ ದೂರಿನ ಮೇರೆಗೆ ಡಾ.ರಾಜಶ್ರೀ ಬಿರಾದಾರ, ಡಾ.ವೈಜಿನಾಥ ಬಿರಾದಾರ, ಸಾಯಿಬಣ್ಣ ವಿರುದ್ಧ ಐಪಿಸಿ ಕಲಂ 304(ಎ) ಹಾಗೂ ರಾಜಶೇಖರ ಪಾಟೀಲ ವಿರುದ್ಧ ಐಪಿಸಿ ಕಲಂ 202 ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕ ಶರಣಗೌಡ ಹಾಗೂ ಸಹಾಯಕ ಅಭಿಯೋಜಕ ಸುನೀಲ ಕಾಂಬಳೆ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.